AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣಕ್ಕಿಳಿದಿಲ್ಲ, ಸ್ಪರ್ಧಾತ್ಮಕ ಪಂದ್ಯವಾಡಿಲ್ಲ: ಹರ್ಷಿತ್ ರಾಣಾ ಆಯ್ಕೆ ನ್ಯಾಯವೇ?

India T20 Squad: ಇಂಗ್ಲೆಂಡ್, ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗೆ ಹಾಗೂ ಏಷ್ಯಾಕಪ್ ಟೂರ್ನಿಗೆ ಭಾರತ ಟಿ20 ತಂಡವನ್ನು ಘೋಷಿಸಲಾಗಿದೆ. ಈ ಮೂರು ತಂಡಗಳಲ್ಲಿ ಹರ್ಷಿತ್ ರಾಣಾ ಕಾಣಿಸಿಕೊಂಡಿದ್ದಾರೆ. ಕುತೂಹಲಕಾರಿ ವಿಷಯ ಎಂದರೆ ಹರ್ಷಿತ್ ರಾಣಾ ಕಳೆದ ಫೆಬ್ರವರಿ ತಿಂಗಳಿಂದ ಒಂದೇ ಒಂದು ಪಂದ್ಯವಾಡಿಲ್ಲ ಎಂಬುದು.

ಕಣಕ್ಕಿಳಿದಿಲ್ಲ, ಸ್ಪರ್ಧಾತ್ಮಕ ಪಂದ್ಯವಾಡಿಲ್ಲ: ಹರ್ಷಿತ್ ರಾಣಾ ಆಯ್ಕೆ ನ್ಯಾಯವೇ?
Harshit Rana Image Credit source: BCCI
ಝಾಹಿರ್ ಯೂಸುಫ್
|

Updated on: Jun 07, 2026 | 12:26 PM

Share

ಕಳೆದ ನಾಲ್ಕು ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದ ಆಟಗಾರನನ್ನು ನೇರವಾಗಿ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ಎಷ್ಟು ತಾರ್ಕಿಕ? ಬಿಸಿಸಿಐ (BCCI) ಇತ್ತೀಚೆಗೆ ಪ್ರಕಟಿಸಿದ ಭಾರತೀಯ ಟಿ20 ತಂಡದಲ್ಲಿ ವೇಗಿ ಹರ್ಷಿತ್ ರಾಣಾ ಅವರ ಸೇರ್ಪಡೆ ಈ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ ಹರ್ಷಿತ್ ರಾಣಾ ಕೊನೆಯ ಬಾರಿ ಕಣಕ್ಕಿಳಿದದ್ದು ಫೆಬ್ರವರಿ ತಿಂಗಳಲ್ಲಿ. ಇದಾದ ಬಳಿಕ ಅವರು ಒಂದೇ ಒಂದು ಪಂದ್ಯವಾಡಿಲ್ಲ.

ನೇರ ಆಯ್ಕೆ ನ್ಯಾಯವೇ?

ಹರ್ಷಿತ್ ರಾಣಾ ಫೆಬ್ರವರಿಯಲ್ಲಿ ನಡೆದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಆ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರು ಉಳಿದಿದ್ದರು. ಇದರ ಪರಿಣಾಮವಾಗಿ ಅವರು ಇಡೀ ಟಿ20 ವಿಶ್ವಕಪ್ ಮತ್ತು ಐಪಿಎಲ್ 2026 ಹೊರಗುಳಿಯಬೇಕಾಯಿತು.

ಯಾವುದೇ ಒಬ್ಬ ಆಟಗಾರ ತಂಡಕ್ಕೆ ಮರಳಬೇಕಾದರೆ ಕನಿಷ್ಠ ಪಕ್ಷ ದೇಶಿ ಕ್ರಿಕೆಟ್ ಅಥವಾ ಯಾವುದೇ ಲೀಗ್ ಪಂದ್ಯಗಳಲ್ಲಿ ತನ್ನ ಫಿಟ್‌ನೆಸ್ ಮತ್ತು ಲಯವನ್ನು ಸಾಬೀತುಪಡಿಸಬೇಕು. ಆದರೆ, ರಾಣಾ ಅವರ ವಿಷಯದಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಕೇವಲ ಎನ್‌ಸಿಎ ಫಿಟ್‌ನೆಸ್ ಸರ್ಟಿಫಿಕೇಟ್ ಆಧಾರದ ಮೇಲೆ ಅವರನ್ನು ನೇರವಾಗಿ ಆಯ್ಕೆ ಮಾಡಿರುವುದು ಇತರೆ ಆಟಗಾರರಿಗೆ ಮಾಡಿದ ಅನ್ಯಾಯ ಎನ್ನದೇ ವಿಧಿಯಿಲ್ಲ.

ಯುವ ಪ್ರತಿಭೆಗಳಿಗೆ ಅನ್ಯಾಯ:

ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿ, ನಿರಂತರವಾಗಿ ವಿಕೆಟ್ ಪಡೆದು ಫಿಟ್ ಆಗಿರುವ ಹಲವು ಯುವ ವೇಗದ ಬೌಲರ್‌ಗಳು ದೇಶದಲ್ಲಿದ್ದಾರೆ. ದೇಶಿ ಟೂರ್ನಿಗಳಲ್ಲಿ ಬೆವರಿಳಿಸಿ ಕಾಯುತ್ತಿರುವ ಆಟಗಾರರನ್ನು ಬದಿಗೊತ್ತಿ, ತಿಂಗಳುಗಳಿಂದ ಮೈದಾನಕ್ಕೇ ಇಳಿಯದ ಆಟಗಾರನಿಗೆ ಮಣೆ ಹಾಕಿರುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದು ಅತ್ಯುತ್ತಮ ಲಯದಲ್ಲಿರುವ ಇತರ ಬೌಲರ್‌ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಆಯ್ಕೆಯಾಗಿದೆ.

ಏಕೆಂದರೆ ಈ ಬಾರಿಯ ಐಪಿಎಲ್​​ನಲ್ಲಿ ಆರ್​ಸಿಬಿ ವೇಗಿ ರಾಸಿಖ್ ಸಲಾಂ ಬರೋಬ್ಬರಿ 18 ವಿಕೆಟ್ ಪಡೆದು ಮಿಂಚಿದ್ದರು. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಅಶೋಕ್ ಶರ್ಮಾ 22 ವಿಕೆಟ್ ಕಬಳಿಸಿದ್ದರು. ಹಾಗೆಯೇ ಕೆಕೆಆರ್ ತಂಡದ ವೇಗಿ ಕಾರ್ತಿಕ್ ತ್ಯಾಗಿ ಕೂಡ 18 ವಿಕೆಟ್ ಉರುಳಿಸಿದ್ದರು.

ಹೀಗೆ ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಲವು ಆಟಗಾರರಿದ್ದರೂ, ಕಳೆದ ನಾಲ್ಕು ತಿಂಗಳುಗಳಿಂದ ಒಂದೇ ಒಂದು ಪಂದ್ಯವಾಡದ ಆಟಗಾರನಿಗೆ ನೇರವಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬುದೇ ಪ್ರಶ್ನೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಒಟ್ಟರೆಯಾಗಿಹರ್ಷಿತ್ ರಾಣಾ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂಶಯವಿಲ್ಲ. ಅವರಲ್ಲಿರುವ ವೇಗ ಮತ್ತು ವಿಕೆಟ್ ಪಡೆಯುವ ಕೌಶಲ್ಯ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಗಾಯದ ನಂತರ ಯಾವುದೇ ಮ್ಯಾಚ್ ಪ್ರ್ಯಾಕ್ಟೀಸ್ ಇಲ್ಲದೆ ಅವರನ್ನು ನೇರವಾಗಿ ಅಂತರರಾಷ್ಟ್ರೀಯ ಸರಣಿಗೆ ಆಯ್ಕೆ ಮಾಡಿರುವುದು ಬಿಸಿಸಿಐ ಮಾಡಿದ ತಪ್ಪು ಆಯ್ಕೆ ಎಂದೇ ಹೇಳಬಹುದು.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More