Breaking: ಕಿಂಗ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಗರಿ..!
ICC ODI Cricketer of the Year 2023: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 2023ನೇ ಸಾಲಿನ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಕಿಂಗ್ ಕೊಹ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಇದಕ್ಕೂ ಮೊದಲು ಮೂರು ಬಾರಿ ಈ ಪ್ರಶಸ್ತಿ ಗೆದ್ದಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) 2023ನೇ ಸಾಲಿನ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ (ICC ODI Cricketer of the Year 2023) ಲಭಿಸಿದೆ. ಇದರೊಂದಿಗೆ ಕಿಂಗ್ ಕೊಹ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಇದಕ್ಕೂ ಮೊದಲು ಮೂರು ಬಾರಿ ಈ ಪ್ರಶಸ್ತಿ ಗೆದ್ದಿದ್ದರು. ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ ವರ್ಷದ ಏಕದಿನ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. 2023 ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ (ODI World Cup 2023) ಅಮೋಘ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿದ್ದ ಕೊಹ್ಲಿ ಬರೋಬ್ಬರಿ 765 ರನ್ ಕಲೆಹಾಕಿದ್ದರು. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು.
ಇನ್ನು 2023ನೇ ಸಾಲಿನ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಹೊರತಾಗಿ ಟೀಂ ಇಂಡಿಯಾದ ಇನ್ನಿಬ್ಬರು ಆಟಗಾರರಾದ ಮೊಹಮ್ಮದ್ ಶಮಿ ಮತ್ತು ಶುಭ್ಮನ್ ಗಿಲ್ ಕೂಡ ಇದ್ದರು. ಆದರೆ ಈ ಇಬ್ಬರನ್ನು ಹಿಂದಿಕ್ಕಿರುವ ಕೊಹ್ಲಿ ದಾಖಲೆಯ ನಾಲ್ಕನೇ ಬಾರಿಗೆ ಈ ಗೌರವಕ್ಕೆ ಭಾಜನರಾಗಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Player of the tournament at the ICC Men’s @cricketworldcup 2023 😎
The extraordinary India batter has been awarded the ICC Men’s ODI Cricketer of the Year 💥 https://t.co/Ea4KJZMImE
— ICC (@ICC) January 25, 2024
50 ಏಕದಿನ ಶತಕಗಳು ಪೂರ್ಣ
2020 ರಿಂದ 2022 ರವರೆಗೆ ರನ್ಗಳ ಬರ ಎದುರಿಸಿದ್ದ ವಿರಾಟ್ ಕೊಹ್ಲಿ, 2023 ರಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದರು. ವರ್ಷದ ಮೊದಲ ತಿಂಗಳಲ್ಲಿ ಅಂದರೆ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಕೊಹ್ಲಿ ಎರಡು ಶತಕಗಳನ್ನು ಸಿಡಿಸಿದ್ದರು. ಆ ನಂತರ ನವೆಂಬರ್ನಲ್ಲಿ ನಡೆದ 2023 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವದಾಖಲೆ 50 ನೇ ಏಕದಿನ ಶತಕವನ್ನು ಪೂರೈಸಿದ್ದರು.
2023 ರಲ್ಲಿ ಕಿಂಗ್ ಕೊಹ್ಲಿ ಪ್ರದರ್ಶನ ಹೇಗಿತ್ತು?
2023ರಲ್ಲಿ ಒಟ್ಟು 27 ಏಕದಿನ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 1377 ರನ್ ಕಲೆಹಾಕಿದ್ದರು. ಈ ಮೂಲಕ ಏಕದಿನ ಮಾದರಿಯಲ್ಲಿ 2023 ರಲ್ಲಿ ಅಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದರು. ಕಳೆದ ವರ್ಷ ವಿರಾಟ್ ಕೊಹ್ಲಿ ಒಟ್ಟು 6 ಶತಕಗಳನ್ನು ಸಿಡಿಸಿದ್ದರು. ಅದರಲ್ಲಿ 3 ಶತಕಗಳು ಏಕದಿನ ವಿಶ್ವಕಪ್‌ನಲ್ಲಿ ಸಿಡಿದಿದ್ದವು. ಇನ್ನು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ 11 ಪಂದ್ಯಗಳನ್ನಾಡಿದ್ದ ವಿರಾಟ್, 95 ಸರಾಸರಿಯಲ್ಲಿ 765 ರನ್ ಕಲೆಹಾಕಿದ್ದರು. ಈ ಟೂರ್ನಿಯಲ್ಲೇ ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿದಿದ್ದರು. ಹಾಗೆಯೇ ಈ ಮಾದರಿಯಲ್ಲಿ 50 ಶತಕಗಳನ್ನು ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಮೇಲೆ ಹೇಳಿದಂತೆ ಈ ಪ್ರಶಸ್ತಿ ರೇಸ್‌ನಲ್ಲಿ ಕೊಹ್ಲಿ ಹೊರತುಪಡಿಸಿ ಟೀಂ ಇಂಡಿಯಾದಿಂದ ಇನ್ನೂ ಇಬ್ಬರು ಸಹ ಆಟಗಾರರು ಇದ್ದರು. ಇದರಲ್ಲಿ ತಂಡದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಕಳೆದ ವರ್ಷ ಏಕದಿನದಲ್ಲಿ ಗರಿಷ್ಠ 1584 ರನ್ ಗಳಿಸಿದ್ದರೆ, ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್‌ನಲ್ಲಿ ದಾಖಲೆಯ 24 ವಿಕೆಟ್ ಸೇರಿದಂತೆ ಒಟ್ಟು 43 ವಿಕೆಟ್‌ಗಳನ್ನು ಪಡೆದಿದ್ದರು. ಇವರಲ್ಲದೆ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಕೂಡ ರೇಸ್‌ನಲ್ಲಿದ್ದರೂ ಕೊಹ್ಲಿ ಅವರೆಲ್ಲರನ್ನೂ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ದಾಖಲೆಯ 10ನೇ ಪ್ರಶಸ್ತಿ
ವಿರಾಟ್ ದಾಖಲೆಯ ನಾಲ್ಕನೇ ಬಾರಿಗೆ ಏಕದಿನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 2012 ಮತ್ತು 2018ರಲ್ಲಿ ಈ ಪ್ರಶಸ್ತಿ ಗೆದ್ದಿದ್ದರೆ, 2020ರಲ್ಲಿ ‘ದಶಮಾನದ ಏಕದಿನ ಕ್ರಿಕೆಟಿಗ’ರಾಗಿ ಆಯ್ಕೆಯಾಗಿದ್ದರು. ಒಟ್ಟಿನಲ್ಲಿ ಇದು ಕೊಹ್ಲಿಗೆ 10ನೇ ಐಸಿಸಿ ಪ್ರಶಸ್ತಿಯಾಗಿದ್ದು, ಈ ವಿಚಾರದಲ್ಲಿ ಅವರ ಹತ್ತಿರ ಯಾರೂ ಇಲ್ಲ. ಸದ್ಯ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರೂ, ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳಿ ಮತ್ತೊಮ್ಮೆ ಈ ರೀತಿಯ ರನ್ ಗಳಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Thu, 25 January 24