Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಘೋಷಣೆ ವಿಳಂಬ ಸಾಧ್ಯತೆ
Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಆಯ್ಕೆ ಜನವರಿ 19 ರೊಳಗೆ ಪ್ರಕಟವಾಗುವ ನಿರೀಕ್ಷೆಯಿದೆ. ಹೀಗಾಗಿ ಬಿಸಿಸಿಐ, ಐಸಿಸಿ ಬಳಿ ಸಮಯಾವಕಾಶ ಕೋರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಹೀಗಾಗಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳನ್ನು ಪ್ರಕಟಿಸಲು ಐಸಿಸಿ ಜನವರಿ 12 ವರೆಗೆ ಗಡುವು ನಿಗದಿಪಡಿಸಿದೆ. ಆದ್ದರಿಂದ ಟೂರ್ನಿಯಲ್ಲಿ ಆಡಲಿರುವ 8 ತಂಡಗಳು ಇನ್ನೇರಡು ದಿನಗಳಲ್ಲಿ ಪ್ರಕಟವಾಗಬೇಕಿದೆ. ಆದರೆ ಬಿಸಿಸಿಐ ಮಾತ್ರ ತನ್ನ ತಂಡವನ್ನು ಪ್ರಕಟಿಸಲು ಕೊಂಚ ಸಮಯಾವಕಾಶ ಕೇಳಬಹುದು ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಐಸಿಸಿಯ ಸೂಚನೆಗಳನ್ನು ಅನುಸರಿಸಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಯಕ್ಕೆ ತಂಡವನ್ನು ಪ್ರಕಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಲು ಐಸಿಸಿ ಬಳಿ ಸಮಯಾವಕಾಶ ಕೇಳಬಹುದು. ಆದರೆ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಎರಡು ಮೂರು ದಿನಗಳಲ್ಲಿ ಪ್ರಕಟಿಸಬಹುದು.
ತಂಡವನ್ನು ಯಾವಾಗ ಘೋಷಿಸಲಾಗುತ್ತದೆ?
ಐಸಿಸಿ, ಸಾಮಾನ್ಯವಾಗಿ ತನ್ನ ಯಾವುದೇ ಪಂದ್ಯಾವಳಿಗಳಿಗೆ 4 ವಾರಗಳ ಮೊದಲು ತಾತ್ಕಾಲಿಕ ತಂಡವನ್ನು ಘೋಷಿಸಲು ಎಲ್ಲಾ ಮಂಡಳಿಗಳಿಗೆ ಸೂಚನೆ ನೀಡುತ್ತದೆ. ಇದಾದ ನಂತರ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಕಾಲಾವಕಾಶವನ್ನು ನೀಡುತ್ತದೆ. ಆದರೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಐಸಿಸಿ, 5 ವಾರಗಳ ಮುಂಚಿತವಾಗಿಯೇ ಎಲ್ಲಾ 8 ಮಂಡಳಿಗಳಿಗೆ ತಮ್ಮ ತಂಡವನ್ನು ಪ್ರಕಟಿಸುವಂತೆ ಸೂಚಿಸಿದೆ. ಸಮಯ ಮುಗಿಯುತ್ತಾ ಬಂದರೂ ಇಂಗ್ಲೆಂಡ್ ಹೊರತುಪಡಿಸಿ ಯಾವ ಮಂಡಳಿಯೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಇದೀಗ ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಲು ಒಂದು ವಾರ ಕಾಲಾವಕಾಶ ಕೇಳಬಹುದು. ಆ ಪ್ರಕಾರ ಜನವರಿ 18 ಅಥವಾ 19 ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಇಂಗ್ಲೆಂಡ್ ಸರಣಿಗೆ ತಂಡ ಯಾವಾಗ ಪ್ರಕಟ?
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡ ಜನವರಿ 22ರಿಂದ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಬಳಿಕ ಫೆಬ್ರವರಿ 6 ರಿಂದ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಿಗೆ ಟೀಂ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ವರದಿ ಪ್ರಕಾರ ಎರಡು ಮೂರು ದಿನಗಳಲ್ಲಿ ಟಿ20 ಸರಣಿಗೆ ತಂಡದ ಪಟ್ಟಿ ಬಿಡುಗಡೆಯಾಗಲಿದೆ. ಬಾಂಗ್ಲಾದೇಶದ ವಿರುದ್ಧ ಆಡಿದ್ದ ಭಾಗಶಃ ಆಟಗಾರರೇ ಈ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ. ಆದರೆ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಗಳಿವೆ.
ಯಾರ್ಯಾರಿಗೆ ಅವಕಾಶ ಸಿಗಬಹುದು?
ಟಿ20 ಸರಣಿಯಿಂದ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದೆ. ಇದರಲ್ಲಿ ಹಿರಿಯ ಬೌಲರ್ ಮೊಹಮ್ಮದ್ ಶಮಿ ಕೂಡ ಆಡುವ ಭರವಸೆ ಇಲ್ಲ. ಆದಾಗ್ಯೂ, ಅವರು ಸುಮಾರು 1.5 ವರ್ಷಗಳ ನಂತರ ಏಕದಿನ ಸರಣಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬಹುದು. ಚಾಂಪಿಯನ್ಸ್ ಟ್ರೋಫಿಗೆ ಅವರ ಆಯ್ಕೆ ಬಹುತೇಕ ಖಚಿತವೆಂದು ಪರಿಗಣಿಸಲಾಗಿದೆ.
ಶಮಿ ಇತ್ತೀಚೆಗೆ ಬಂಗಾಳದ ಪರವಾಗಿ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸಿದ್ದರು. ವರದಿಯ ಪ್ರಕಾರ ಶಮಿ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಲಿಯರೆನ್ಸ್ ಪಡೆದಿದ್ದಾರೆ. ಇವರಲ್ಲದೆ, ವಾಷಿಂಗ್ಟನ್ ಸುಂದರ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಏಕದಿನ ಸರಣಿಯಲ್ಲಿ ನೋಡಬಹುದಾಗಿದ್ದು, ನಿತೀಶ್ ಕುಮಾರ್ ರೆಡ್ಡಿ ಟಿ20ಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Sat, 11 January 25