World Cup 2025: ಭಾರತ ಈ 3 ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ವಿಶ್ವಕಪ್ ಗೆಲ್ಲುವುದು ಕಷ್ಟಕಷ್ಟ
Women's ODI World Cup 2025: 2025ರ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ, ಟೀಂ ಇಂಡಿಯಾ ಪ್ರದರ್ಶನದಲ್ಲಿ ನ್ಯೂನತೆಗಳು ಕಂಡುಬಂದಿವೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ, ಕಳಪೆ ಫೀಲ್ಡಿಂಗ್ ಹಾಗೂ DRS ನಿರ್ಧಾರಗಳಲ್ಲಿ ನಾಯಕಿಯ ಎಡವಟ್ಟು ತಂಡಕ್ಕೆ ಸವಾಲಾಗಿವೆ. ಬಲಿಷ್ಠ ತಂಡಗಳ ವಿರುದ್ಧ ವಿಶ್ವಕಪ್ ಗೆಲ್ಲಲು ಈ ಸಮಸ್ಯೆಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಲೇಖನ ವಿಶ್ಲೇಷಿಸುತ್ತದೆ.

2025 ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ (Women’s ODI World Cup 2025) ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ (India vs Pakistan) ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ತಂಡವು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಪಾಕಿಸ್ತಾನವನ್ನು 88 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ, ವಿಶ್ವಕಪ್‌ನಲ್ಲಿ ತನ್ನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಉತ್ತಮವಾಗಿ ಆರಂಭಿಸಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದರೂ ತಂಡದ ಕೆಲವು ನ್ಯೂನತೆಗಳು ಮ್ಯಾನೇಜ್ಮೆಂಟ್ ಹಾಗೂ ನಾಯಕಿಯ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ. ಮುಂದಿನ ಪಂದ್ಯದೊಳಗೆ ಹರ್ಮನ್ಪ್ರೀತ್ ಪಡೆ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ವಿಶ್ವಕಪ್ ಗೆಲ್ಲುವುದು ಕಷ್ಟವಾಗಬಹುದು. ಹಾಗಿದ್ದರೆ ಭಾರತ ತಂಡ ಮಾಡಿದ ತಪ್ಪುಗಳಾದರೂ ಏನು?
ಅಗ್ರಕ್ರಮಾಂಕ ಮಿಂಚುತ್ತಿಲ್ಲ
ಕಳೆದ ಪಂದ್ಯದಂತೆ, ಈ ಪಂದ್ಯದಲ್ಲೂ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಕೈಕೊಟ್ಟಿತು. ವಿಶೇಷವಾಗಿ ಉಪನಾಯಕಿ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ವೈಫಲ್ಯ ತಂಡವನ್ನು ಹೆಚ್ಚು ಚಿಂತೆಗೀಡುಮಾಡಿದೆ. ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಸಾಕಷ್ಟು ರನ್ ಗಳಿಸಿದ್ದ ಸ್ಮೃತಿ ಮಂಧಾನ, ವಿಶ್ವಕಪ್‌ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಕ್ರಮವಾಗಿ 8 ಮತ್ತು 23 ರನ್ ಗಳಿಸಿದ್ದಾರೆ. ಇತ್ತ ಮತ್ತೊರ್ವ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ (31) ಮತ್ತು ಹರ್ಲೀನ್ ಡಿಯೋಲ್ ( 46) ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ. ಸತತ ಎರಡನೇ ಪಂದ್ಯದಲ್ಲೂ ಅಗ್ರ 5 ರಲ್ಲಿ ಯಾವುದೇ ಬ್ಯಾಟರ್ಗೆ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ . ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ , ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ, ಗೆಲುವು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ.
ತೀರ ಕಳಪೆ ಫಿಲ್ಡಿಂಗ್
ಟೀಂ ಇಂಡಿಯಾದ ಬೌಲಿಂಗ್ ಎಷ್ಟೇ ಉತ್ತಮವಾಗಿದ್ದರೂ, ಫೀಲ್ಡಿಂಗ್ ಹೆಚ್ಚಿನ ಬೆಂಬಲ ನೀಡಲಿಲ್ಲ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಗ್ರೌಂಡ್ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಉತ್ತಮವಾಗಿರಲಿಲ್ಲ. ವಿಕೆಟ್ ಕೀಪರ್ ರಿಚಾ ಘೋಷ್ ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟರು. ಇದರಿಂದಾಗಿ , ಸಿದ್ರಾ ಅಮೀನ್ ಮತ್ತು ನಟಾಲಿಯಾ ಪರ್ವೇಜ್ 69 ರನ್‌ಗಳ ಪಾಲುದಾರಿಕೆಯನ್ನು ನೀಡಿ ಟೀಂ ಇಂಡಿಯಾಕ್ಕೆ ಒತ್ತಡವನ್ನುಂಟುಮಾಡಿದರು . ಶ್ರೀಚರಣಿ ತಮ್ಮ ಬೌಲಿಂಗ್‌ನಲ್ಲಿಯೇ ಕ್ಯಾಚ್ ಕೈಬಿಟ್ಟರು. ಇದಲ್ಲದೆ, ಟೀಂ ಇಂಡಿಯಾ ಕೆಲವು ಸಂದರ್ಭಗಳಲ್ಲಿ ಕಳಪೆ ಫೀಲ್ಡಿಂಗ್ ಮಾಡಿತು , ಇದರಿಂದಾಗಿ ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಡಲಾಯಿತು . ಫೀಲ್ಡಿಂಗ್‌ನಲ್ಲಿನ ಈ ತಪ್ಪುಗಳು ಟೀಂ ಇಂಡಿಯಾಕ್ಕೆ ಮತ್ತಷ್ಟು ಹಾನಿ ಮಾಡಬಹುದು .
DRS ತೆಗೆದುಕೊಳ್ಳುವಲ್ಲಿ ನಾಯಕಿ ವಿಫಲ
ಡಿಆರ್‌ಎಸ್ ವಿಚಾರದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಪರಿಣಾಮಕಾರಿಯಾಗಿರಲಿಲ್ಲ. ಇತ್ತ ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಈ ವಿಷಯದಲ್ಲಿ ಅವರಿಗೆ ಉತ್ತಮ ಬೆಂಬಲ ನೀಡಲಿಲ್ಲ. ಪಾಕಿಸ್ತಾನದ ಇನ್ನಿಂಗ್ಸ್‌ನಲ್ಲಿ , ಮೊದಲ ಎಸೆತದಲ್ಲೇ ಅಂಪೈರ್ ನಿರ್ಧಾರದ ವಿರುದ್ಧ ವಿಮರ್ಶೆ ತೆಗೆದುಕೊಳ್ಳಲಾಯಿತು. ಇದರಲ್ಲಿ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಗುತ್ತಿರುವುದು ಕಂಡುಬಂದಿತು. ಆ ಬಳಿಕವೂ ಅಂಪೈರ್ ಮೂರು ಬಾರಿ ಎಲ್‌ಬಿಡಬ್ಲ್ಯೂ ನಿರ್ಧಾರವನ್ನು ತಿರಸ್ಕರಿಸಿದರು, ಆದರೆ ಟೀಂ ಇಂಡಿಯಾ ವಿಮರ್ಶೆ ತೆಗೆದುಕೊಳ್ಳಲಿಲ್ಲ . ಈ ಮೂರು ಸಂದರ್ಭಗಳಲ್ಲಿ, ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿಯುತ್ತಿತ್ತು. ಅಲ್ಲದೆ ಟೀಂ ಇಂಡಿಯಾ ತನ್ನ ಎರಡೂ ವಿಮರ್ಶೆಗಳನ್ನು ಸರಿಯಾಗಿ ಬಳಸಲಿಲ್ಲ. ಇದರ ಪ್ರಯೋಜನ ಪಾಕ್ ತಂಡಕ್ಕಾದರೂ ಅದು ಗೆಲುವು ಸಾಧಿಸಲಿಲ್ಲ. ಭಾರತ ತಂಡ ಇದೇ ರೀತಿಯ ಕೆಲಸವನ್ನು ಬಲಿಷ್ಠ ತಂಡಗಳೆದುರು ಮಾಡಿದರೆ ಗೆಲುವು ಸಾಧಿಸುವುದು ಅಸಾಧ್ಯದ ಮಾತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Mon, 6 October 25




