ಕಿವೀಸ್ ವಿರುದ್ಧ 2-0 ಮುನ್ನಡೆ ಸಾಧಿಸಿದ ಭಾರತಕ್ಕೆ ಮೂವರದ್ದೇ ತಲೆನೋವು

ನ್ಯೂಜಿಲೆಂಡ್ ವಿರುದ್ಧದ ODI ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದರೂ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಿಸುತ್ತಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಹಾಗೂ ಶಾರ್ಟ್ ಬಾಲ್‌ಗಳ ಎದುರು ಅವರ ಹೋರಾಟ ಮುಂದುವರಿದಿದೆ. 2027ರ ವಿಶ್ವಕಪ್ ದೃಷ್ಟಿಯಿಂದ ಈ ಆಟಗಾರರು ಫಾರ್ಮ್ ಕಂಡುಕೊಳ್ಳುವುದು ತಂಡಕ್ಕೆ ಅತಿ ಮುಖ್ಯವಾಗಿದೆ.

ಕಿವೀಸ್ ವಿರುದ್ಧ 2-0 ಮುನ್ನಡೆ ಸಾಧಿಸಿದ ಭಾರತಕ್ಕೆ ಮೂವರದ್ದೇ ತಲೆನೋವು
ಟೀಂ ಇಂಡಿಯಾ
Image Credit source: BCCI X

Updated on: Nov 08, 2026 | 6:00 PM

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ, ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಮಳೆ ಅಡ್ಡಿಪಡಿಸಿದರೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ಗೆಲ್ಲಲು ಉಳಿದ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಸಾಕು. ಆದರೆ, ಸತತ ಎರಡು ಗೆಲುವು ದಾಖಲಿಸಿದ್ದರೂ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವಂತಿಲ್ಲ. ತಂಡದ ಮೂವರು ಪ್ರಮುಖ ಆಟಗಾರರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅವರ ಕಳಪೆ ಫಾರ್ಮ್ ಇದೀಗ ತಂಡದ ಚಿಂತೆಗೆ ಕಾರಣವಾಗಿದೆ.

ರೋಹಿತ್ ಶರ್ಮಾ: ವಿದೇಶಿ ಪಿಚ್‌ಗಳಲ್ಲಿ ಮತ್ತೆ ರನ್ ಬರ

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಟೀಂ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಹಿಟ್‌ಮ್ಯಾನ್, ನ್ಯೂಜಿಲೆಂಡ್ ನೆಲದಲ್ಲಿ ಮಾತ್ರ ರನ್ ಗಳಿಸಲು ಪರದಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದ್ದ ರೋಹಿತ್, ಎರಡನೇ ಪಂದ್ಯದಲ್ಲೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಅವರು 28 ಎಸೆತಗಳನ್ನು ಎದುರಿಸಿ ಕೇವಲ 23 ರನ್ ಗಳಿಸಲಷ್ಟೇ ಶಕ್ತರಾದರು.

Loading...

2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿರುವ ರೋಹಿತ್‌ಗೆ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಉಳಿದ ಮೂರು ಪಂದ್ಯಗಳು ಅವರ ಪಾಲಿಗೆ ಮಹತ್ವದ್ದಾಗಿವೆ.

ಶ್ರೇಯಸ್ ಅಯ್ಯರ್​ಗೆ ಶಾರ್ಟ್ ಬಾಲ್ ಸಮಸ್ಯೆ

ಈ ಪಟ್ಟಿಯಲ್ಲಿರುವ ಎರಡನೇ ಆಟಗಾರ ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್. ಇತ್ತೀಚಿನ ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಅವರು ಪರದಾಡುತ್ತಿದ್ದಾರೆ. ಅದರಲ್ಲೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವಾಗ ಪದೇಪದೇ ಎಡವುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಶ್ರೇಯಸ್ ಗಳಿಸಿದ್ದು ಕೇವಲ 45 ರನ್ ಮಾತ್ರ. ಕಿವೀಸ್ ಬೌಲರ್‌ಗಳು ಅವರ ಈ ದೌರ್ಬಲ್ಯವನ್ನು ಚೆನ್ನಾಗಿ ಅರಿತುಕೊಂಡಿದ್ದು, ಶಾರ್ಟ್ ಬಾಲ್‌ಗಳ ಮೂಲಕ ಒತ್ತಡ ಹೇರುತ್ತಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಶ್ರೇಯಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಜವಾಬ್ದಾರಿಯುತ ಆಟವಾಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅಗತ್ಯವಿದೆ.

ಅಕ್ಷರ್ ಪಟೇಲ್: ಬ್ಯಾಟಿಂಗ್‌ನಲ್ಲಿ ಮುಂದುವರಿದ ವೈಫಲ್ಯ

ಮೂರನೇ ಆಟಗಾರ ಆಲ್‌ರೌಂಡರ್ ಅಕ್ಷರ್ ಪಟೇಲ್. ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುತ್ತಿದ್ದ ಅಕ್ಷರ್, ಈ ಸರಣಿಯಲ್ಲಿ ಮಾತ್ರ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಕ್ಷರ್, ಎರಡನೇ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಹೀಗಾಗಿ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಅವರು ಸುಧಾರಣೆ ಕಾಣಬೇಕಿದೆ. ತಂಡಕ್ಕೆ ಅಗತ್ಯವಿದ್ದಾಗ ರನ್ ಗಳಿಸುವ ಸಾಮರ್ಥ್ಯವನ್ನು ಮರಳಿ ತೋರಿಸಬೇಕಾಗಿದೆ.

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಸ್ಥಳಾಂತರ; ಬಿಸಿಸಿಐಗೆ ಅಧಿಕೃತ ಮನವಿ

ಉಳಿದ ಮೂರು ಪಂದ್ಯಗಳು ಈ ಆಟಗಾರರಿಗೆ ಅಗ್ನಿಪರೀಕ್ಷೆ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದರೂ, ಈ ಮೂವರು ಆಟಗಾರರ ಪ್ರದರ್ಶನದ ಬಗ್ಗೆ ತಂಡದ ಆಡಳಿತ ಮಂಡಳಿ ಗಮನ ಹರಿಸಬೇಕಿದೆ. 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತಕ್ಕೆ ಈ ಸರಣಿ ಆಟಗಾರರ ಸಾಮರ್ಥ್ಯ ಮತ್ತು ಫಾರ್ಮ್ ಪರೀಕ್ಷಿಸಲು ಉತ್ತಮ ಅವಕಾಶವಾಗಿದೆ. ಹೀಗಾಗಿ ಉಳಿದ ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಹೇಗೆ ಆಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಈ ಮೂವರು ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us