IND vs AUS: ಈ ಸಲ ಕಪ್ ನಮ್ದೆ: ನಾಥನ್ ಲಿಯಾನ್
Border - Gavaskar Trophy: ಆಸ್ಟ್ರೇಲಿಯಾ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಕೊನೆಯ ಬಾರಿಗೆ ಗೆದ್ದಿರುವುದು 2014-15 ರಲ್ಲಿ. ಇದಾದ ಬಳಿಕ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಸರಣಿ ಜಯಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಎರಡು ಸರಣಿಗಳನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದಿರುವುದು ವಿಶೇಷ.
ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ನಾವು ಮರಳಿ ಪಡೆಯುತ್ತೇವೆ… ಹೀಗಂದಿದ್ದು ಮತ್ಯಾರೂ ಅಲ್ಲ, ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್. ಕಳೆದ ಒಂದು ದಶಕದಿಂದ BGT ಸರಣಿಯಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಆದರೆ ಈ ಬಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಆಸೀಸ್ ಸ್ಪಿನ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಎಸ್ಪಿಎನ್ ಜೊತೆ ಮಾತನಾಡಿದ ನಾಥನ್ ಲಿಯಾನ್, ಕಳೆದ 10 ವರ್ಷಗಳಲ್ಲಿ ಭಾರತ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ತವರು ಮತ್ತು ವಿದೇಶದಲ್ಲೂ ಸರಣಿಗಳನ್ನು ಗೆದ್ದಿದೆ. ಇನ್ನು ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆದ್ದಿರುವುದು ಅತೀ ದೊಡ್ಡ ಸಾಧನೆ.
ನಾವು ಭಾರತದ ವಿರುದ್ಧ ಟೆಸ್ಟ್ ಸರಣಿ ಗೆದ್ದು 10 ವರ್ಷಗಳು ಕಳೆದಿವೆ. ಒಂದಾರ್ಥದಲ್ಲಿ ಇದೊಂದು ಅಪೂರ್ಣ ವ್ಯವಹಾರ. ಬಹಳ ವರ್ಷಗಳವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗದೇ ಇರುವುದರಿಂದ ನಮ್ಮ ಆಟಗಾರರು ಗೆಲುವಿನ ಹಸಿವಿನಲ್ಲಿದ್ದಾರೆ. ಹೀಗಾಗಿ ಈ ಬಾರಿ ನಾವು ಟ್ರೋಫಿಯನ್ನು ಮರಳಿ ಪಡೆಯುತ್ತೇವೆ ಎಂದು ನಾಥನ್ ಲಿಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2025: RCB ಪರ ಆಡುವ ಇಂಗಿತ ವ್ಯಕ್ತಪಡಿಸಿದ ರಿಂಕು ಸಿಂಗ್
ಅಂದಹಾಗೆ ನಾಥನ್ ಲಿಯಾನ್ ಟೀಮ್ ಇಂಡಿಯಾ ವಿರುದ್ಧ 27 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1249.1 ಓವರ್ ಎಸೆದಿರುವ ಅವರು ಒಟ್ಟು 121 ವಿಕೆಟ್ ಕಬಳಿಸಿದ್ದಾರೆ. ಅಂದರೆ ನಾಥನ್ ಲಿಯಾನ್ ತಮ್ಮ ಟೆಸ್ಟ್ ಕೆರಿಯರ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ್ದು ಭಾರತದ ವಿರುದ್ಧ ಎಂಬುದು ವಿಶೇಷ. ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿನ ಸತತ ಸೋಲಿಗೆ ಬ್ರೇಕ್ ಹಾಕುವುವ ವಿಶ್ವಾಸದ್ದಾರೆ ನಾಥನ್ ಲಿಯಾನ್.
ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ ಶುರು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |