IND vs ENG: ವೈಭವ್​ಗೆ ಅವಕಾಶ ಸಿಗುತ್ತಾ? 2ನೇ ಟಿ20 ಪಂದ್ಯಕ್ಕೆ ಹೇಗಿರಲಿದೆ ಪ್ಲೇಯಿಂಗ್ 11?

India vs England 2nd T20 Probable XI: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ T20 ಪಂದ್ಯ ಶನಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗ ಪ್ರಕಟಿಸಿದೆ. ಭಾರತದ ಸಂಭಾವ್ಯ ತಂಡದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಕಳಪೆ ಫಾರ್ಮ್‌ನಲ್ಲಿದ್ದರೂ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಗಳಿವೆ. ರವಿ ಬಿಷ್ಣೋಯ್ ಬದಲಿಗೆ ಯುವ ವೇಗಿ ಪ್ರಿನ್ಸ್ ಯಾದವ್ ಸೇರ್ಪಡೆ ನಿರೀಕ್ಷೆಯಿದೆ.

IND vs ENG: ವೈಭವ್​ಗೆ ಅವಕಾಶ ಸಿಗುತ್ತಾ? 2ನೇ ಟಿ20 ಪಂದ್ಯಕ್ಕೆ ಹೇಗಿರಲಿದೆ ಪ್ಲೇಯಿಂಗ್ 11?
Ind Vs Eng

Updated on: Jul 03, 2026 | 10:37 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಶನಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಈಗಾಗಲೇ ಆತಿಥೇಯ ಇಂಗ್ಲೆಂಡ್‌ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಅದರಂತೆ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಏಕೆಂದರೆ ಮಳೆಯಿಂದಾಗಿ ಮೊದಲ ಟಿ20 ಪಂದ್ಯ ಪೂರ್ಣಗೊಳ್ಳಲಿಲ್ಲ. ಅದಾಗ್ಯೂ ಭಾರತ ತಂಡಕ್ಕೆ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿತ್ತು. ಹೀಗಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿದ್ದವರಿಗೆ 2ನೇ ಪಂದ್ಯದಿಂದ ಗೇಟ್​ಪಾಸ್ ಸಿಗುತ್ತಾ? ಮತ್ತು ಬೆಂಚ್ ಕಾಯುತ್ತಿರುವ ವೈಭವ್​ಗೆ ಆಡುವ ಅವಕಾಶ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ.

ಸಂಜುಗೆ ಮತ್ತೆ ಅವಕಾಶ

ಆದರೆ ಮೇಲ್ನೋಟಕ್ಕೆ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಮೊದಲ ಟಿ20 ಪಂದ್ಯ ಸೇರಿದಂತೆ ಐರ್ಲೆಂಡ್ ವಿರುದ್ಧವೂ ರನ್ ಬರ ಎದುರಿಸಿದ್ದ ಆರಂಭಿಕ ಸಂಜು ಸ್ಯಾಮ್ಸನ್​ಗೆ ಮತ್ತೊಮ್ಮೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಆರಂಭಿಕರಾಗಿ ಸಂಜು ಮತ್ತು ಅಭಿಷೇಕ್ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸಬಹುದು. ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಇಶಾನ್ ಕಿಶನ್​ ಆಡಿರುವ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಆದಾಗ್ಯೂ ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆ.

ಮಧ್ಯಮ ಕ್ರಮಾಂಕ ಹೀಗಿರಲಿದೆ

4ನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಬಂದರೆ, ಐದನೇ ಕ್ರಮಾಂಕದಲ್ಲಿ ತಿಲಕ್ ವರ್ಮಾಗೆ ಅವಕಾಶ ಸಿಗಲಿದೆ. ತಿಲಕ್ ಅವರ ಸ್ಟ್ರೈಕ್ ರೇಟ್ ತಂಡಕ್ಕೆ ತಲೆನೋವು ತಂದಿದೆಯಾದರೂ ಅವರನ್ನು ಆ ಸ್ಥಾನದಲ್ಲಿ ಮುಂದವರೆಸುವುದು ಖಚಿತ. ಬೌಲಿಂಗ್ ಆಲ್‌ರೌಂಡರ್ ಆಗಿ ಶಿವಂ ದುಬೆ ಮುಂದುವರೆಯಲಿದ್ದಾರೆ. ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಆಡುವುದು ಖಚಿತ. ಯುವ ವೇಗಿ ಹರ್ಷಿತ್ ರಾಣಾ ಜೊತೆಗೆ ಅರ್ಷದೀಪ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ 1 ಬದಲಾವಣೆ

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಆದರೆ ಎರಡನೇ ಟಿ20 ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳು ಆಡುವುದು ಅನುಮಾನ ಹೀಗಾಗಿ ಸ್ಪಿನ್ನರ್ ರವಿ ಬಿಷ್ಣೋಯಿ ಬದಲಿಗೆ ಯುವ ವೇಗಿ ಪ್ರಿನ್ಸ್ ಯಾದವ್​ಗೆ ಆಯ್ಕೆ ಮಂಡಳಿ ಮಣೆ ಹಾಕಬಹುದು. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ವರುಣ್ ಚಕ್ರವರ್ತಿ ಆಡಲಿದ್ದಾರೆ. ಅಂದರೆ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 1 ಬದಲಾವಣೆಯಾಗುವ ಸಾಧ್ಯತೆಗಳಿವೆ. ಇದರರ್ಥ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಆಡುವ ಅವಕಾಶ ಪಡೆಯುವುದಿಲ್ಲ ಎನ್ನಬಹುದು.

ವೈಭವ್​ಗೆ ಅವಕಾಶ ಸಿಗದಿರುವುದು ದುರದೃಷ್ಟಕರ ಎಂದ ಡಿವಿಲಿಯರ್ಸ್

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್/ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್.

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ವಿಲ್ ಜ್ಯಾಕ್ಸ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us