IND vs ENG: 112 ವರ್ಷಗಳ ಹಳೆಯ ದಾಖಲೆ ಸರಿಗಟ್ಟಲಿದೆಯಾ ಟೀಮ್ ಇಂಡಿಯಾ
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ ಕೊನೆಯ ಪಂದ್ಯಕ್ಕೂ ಮುನ್ನ ಸರಣಿಯನ್ನು ವಶಪಡಿಸಿಕೊಂಡಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಕೊನೆಯ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದರೆ, ಉಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ 5ನೇ ಪಂದ್ಯಕ್ಕಾಗಿ ಸಜ್ಜಾಗಿದೆ.
ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಗೆಲುವು ದಾಖಲಿಸಿದರೆ, ಬೃಹತ್ ದಾಖಲೆಯೊಂದನ್ನು ಬರೆಯಬಹುದು. ಅದು ಕೂಡ 112 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
112 ವರ್ಷಗಳ ಹಳೆಯ ದಾಖಲೆ:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯನ್ನು 4-1ರಿಂದ ವಶಪಡಿಸಿಕೊಳ್ಳಲಿದೆ. ಭಾರತ ತಂಡವು ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 112 ವರ್ಷಗಳ ನಂತರ ಎರಡನೇ ಬಾರಿಗೆ 5 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದ ವಿಶೇಷ ದಾಖಲೆ ಟೀಮ್ ಇಂಡಿಯಾ ಪಾಲಾಗಲಿದೆ.
ಇದಕ್ಕೂ ಮುನ್ನ 1912ರಲ್ಲಿ ಇಂಗ್ಲೆಂಡ್ ತಂಡ ಇಂತಹದೊಂದು ಸಾಧನೆ ಮಾಡಿತ್ತು. ಇದಾದ ಬಳಿಕ ಯಾವುದೇ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದಿಲ್ಲ. ಇದೀಗ 112 ವರ್ಷಗಳ ಬಳಿಕ ಅಂತಹದೊಂದು ಸಾಧನೆ ಮಾಡುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.
ಒಂದು ವೇಳೆ ಟೀಮ್ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ, 4-1 ಅಂತರದಿಂದ ಸರಣಿ ಗೆದ್ದರೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡ ಎನಿಸಿಕೊಳ್ಳಲಿದೆ. ಇದಕ್ಕೂ ಮುನ್ನ 1897-98 ಮತ್ತು 1901-02ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತು ಆಸ್ಟ್ರೇಲಿಯಾ ಆ ಬಳಿಕ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು.
ಇದಾದ ಬಳಿಕ 1912 ರಲ್ಲಿ ಇಂಗ್ಲೆಂಡ್ ಇಂತಹದೊಂದು ಸಾಧನೆ ಮಾಡಿತ್ತು. ಇದೀಗ ಈ ಸಾಧನೆ ಮಾಡಿದ ಮೂರನೇ ತಂಡ ಎನಿಸಿಕೊಳ್ಳಲು ಟೀಮ್ ಇಂಡಿಯಾಗೆ ಒಂದು ಗೆಲುವಿನ ಅಗತ್ಯತೆಯಿದೆ. ಅದರಂತೆ ಧರ್ಮಶಾಲಾದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.