4 ವರ್ಷಗಳ ಬಳಿಕ ಕಣಕ್ಕಿಳಿದ ಜೋಫ್ರಾ ಆರ್ಚರ್: ಟೀಮ್ ಇಂಡಿಯಾಗೆ ಎಚ್ಚರಿಕೆ
India vs England Test Series: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಸೋಲನುಭವಿಸಿದೆ. ಇನ್ನು ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಜುಲೈ 2 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಎಡ್ಜ್ ಬಾಸ್ಟನ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಫಸ್ಟ್ ಕ್ಲಾಸ್ ಕ್ರಿಕೆಟ್ಗೆ ಮತ್ತೆ ಮರಳಿದ್ದಾರೆ. ಅದು ಕೂಡ ಬರೋಬ್ಬರಿ 4 ವರ್ಷಗಳ ಬಳಿಕ. ಫಿಟ್ನೆಸ್ ಸಮಸ್ಯೆಯ ಕಾರಣ ವರ್ಷಗಳ ಕಾಲ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದ ಆರ್ಚರ್ ಇತ್ತೀಚೆಗಷ್ಟೇ ಸೀಮಿತ ಓವರ್ಗಳ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರು ದೀರ್ಘಾವಧಿಯ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ವರ್ಷಗಳ ಬಳಿಕ ಆರ್ಚರ್ ರೆಡ್ ಬಾಲ್ ಕ್ರಿಕೆಟ್ಗೆ ಮರಳಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಟೆಸ್ಟ್ ಟೂರ್ನಿಯಲ್ಲಿ ಜೋಫ್ರಾ ಆರ್ಚರ್ ಸಸೆಕ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ. ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸೈಡ್ ಮೈದಾನದಲ್ಲಿ ನಡೆದ ಡರ್ಹ್ಯಾಮ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಆರ್ಚರ್ ಮೊದಲ ಇನಿಂಗ್ಸ್ನಲ್ಲಿ 18 ಓವರ್ಗಳನ್ನು ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಕೇವಲ 32 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಜೋಫ್ರಾ ಆರ್ಚರ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದಾರೆ.
ಇತ್ತ ಕೌಂಟಿ ಕ್ರಿಕೆಟ್ನಲ್ಲಿ ಆರ್ಚರ್ 18 ಓವರ್ಗಳನ್ನು ಎಸೆಯುಲು ಯಶಸ್ವಿಯಾಗಿರುವ ಕಾರಣ ಅವರನ್ನು ಭಾರತದ ವಿರುದ್ಧದ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳುವ ಸಲುವಾಗಿಯೇ ಆರ್ಚರ್ ಮತ್ತೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಕಣಕ್ಕಿಳಿದಿದ್ದಾರೆ.
ಅದರಲ್ಲೂ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯ ಮುಗಿದರೂ ಇನ್ನೂ 4 ಮ್ಯಾಚ್ಗಳು ಬಾಕಿಯಿವೆ. ಹೀಗಾಗಿ ಈ ಸರಣಿಯ ಮೂಲಕವೇ ಕಂಬ್ಯಾಕ್ ಮಾಡಲು ಜೋಫ್ರಾ ಆರ್ಚರ್ ಪ್ಲ್ಯಾನ್ ರೂಪಿಸಿದ್ದಾರೆ. ಅದರಂತೆ ಭಾರತದ ವಿರುದ್ಧದ ಎರಡನೇ ಅಥವಾ ಮೂರನೇ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಒಂದು ವೇಳೆ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡವನ್ನು ಸೇರಿಕೊಂಡರೆ ಆಂಗ್ಲರ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ. ಅದರಲ್ಲೂ ಮಾರಕ ಬೌನ್ಸರ್ಗೆ ಹೆಸರುವಾಸಿಯಾಗಿರುವ ಆರ್ಚರ್ ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹೀಗಾಗಿ ಜೋಫ್ರಾ ಎಂಟ್ರಿಗೂ ಮುನ್ನ ಟೀಮ್ ಇಂಡಿಯಾ ಬ್ಯಾಟರ್ಗಳು ಘಾತಕ ಎಸೆತಗಳನ್ನು ಎದುರಿಸಲು ಸಜ್ಜಾಗಬೇಕಿರುವುದು ಅನಿವಾರ್ಯ.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
- 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
- 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
- 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್.
ಇದನ್ನೂ ಓದಿ: ICC Test Ranking: ಟೆಸ್ಟ್ ರ್ಯಾಂಕಿಂಗ್ ಪ್ರಕಟ: ಅಗ್ರ ಹತ್ತರಲ್ಲಿ 4 ಭಾರತೀಯರು
ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಶೊಯೆಬ್ ಬಶೀರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಂಗ್, ಕ್ರಿಸ್ ವೋಕ್ಸ್.
Published On - 2:17 pm, Thu, 26 June 25
