‘ಟಾಪ್’ ಬ್ಯಾಟಿಂಗ್… ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ!

ವಿದೇಶಿ ನೆಲದಲ್ಲಿ ಭಾರತೀಯ ಬ್ಯಾಟಿಂಗ್ ಪಡೆಯ ಹೊಸ ಯುಗ ಆರಂಭವಾಗಿದೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ನಾಲ್ವರು ಬ್ಯಾಟರ್‌ಗಳು (Top-4) ಅರ್ಧಶತಕದ ಗಡಿ ದಾಟುವ ಮೂಲಕ, SENA ರಾಷ್ಟ್ರಗಳ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಟಾಪ್ ಬ್ಯಾಟಿಂಗ್... ಹೊಸ ಇತಿಹಾಸ ಬರೆದ ಟೀಮ್ ಇಂಡಿಯಾ!
Team India
Image Credit source: GettyImages

Updated on: Nov 21, 2026 | 10:11 AM

ವಿದೇಶಿ ಪಿಚ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ ವೇಗ ಮತ್ತು ಸ್ವಿಂಗ್‌ಗೆ ನೆರವಾಗುವ SENA ರಾಷ್ಟ್ರಗಳಲ್ಲಿ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ಟೆಸ್ಟ್ ಪಂದ್ಯ ಆಡುವುದು ಯಾವುದೇ ಏಷ್ಯನ್ ತಂಡಕ್ಕೆ ಸವಾಲಿನ ಕೆಲಸ. ಆದರೆ, ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ, SENA ದೇಶವೊಂದರಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಭಾರತದ ಮೊದಲ ನಾಲ್ವರು ಬ್ಯಾಟರ್‌ಗಳು ತಲಾ 50ಕ್ಕೂ ಹೆಚ್ಚು ರನ್ ಕಲೆಹಾಕಿದ ಅಪರೂಪದ ದಾಖಲೆಗೆ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನ ಸಾಕ್ಷಿಯಾಗಿದೆ.

Loading...

ಇತಿಹಾಸ ಬರೆದ ನಾಲ್ವರು:

ನ್ಯೂಝಿಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ 368 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಭದ್ರ ಬುನಾದಿ ಹಾಕಿಕೊಟ್ಟರು…

  1. ಯಶಸ್ವಿ ಜೈಸ್ವಾಲ್ (85 ರನ್): ಆರಂಭಿಕರಾಗಿ ಕಣಕ್ಕಿಳಿದ ಯುವ ಎಡಗೈ ಬ್ಯಾಟರ್ ಜೈಸ್ವಾಲ್, ಕೇವಲ 89 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಆಕ್ರಮಣಕಾರಿ 85 ರನ್ ಸಿಡಿಸಿದರು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡುವ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು.
  2. ಕೆ.ಎಲ್. ರಾಹುಲ್ (136 ರನ್): ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಅಮೋಘ ಫಾರ್ಮ್ ಮುಂದುವರಿಸಿ 290 ಎಸೆತಗಳಲ್ಲಿ 136 ರನ್ ಬಾರಿಸಿದರು. ಈ ಶತಕದೊಂದಿಗೆ ರಾಹುಲ್, ಎಲ್ಲಾ ನಾಲ್ಕು SENA ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ಐತಿಹಾಸಿಕ ಹಿರಿಮೆಗೂ ಪಾತ್ರರಾದರು.
  3. ದೇವದತ್ ಪಡಿಕ್ಕಲ್ (80 ರನ್): ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್, ರಾಹುಲ್ ಜೊತೆಗೂಡಿ ಎರಡನೇ ವಿಕೆಟ್‌ಗೆ 162 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ತಾಳ್ಮೆ ಮತ್ತು ಕ್ಲಾಸ್ ಆಟವಾಡಿದ ಪಡಿಕ್ಕಲ್ 80 ರನ್ ಗಳಿಸಿ ಮಿಂಚಿದರು.
  4.  ಶುಭ್​ಮನ್ ಗಿಲ್ (ಅರ್ಧಶತಕ): ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶುಭ್​​ಮನ್ ಗಿಲ್, ಕಿವೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ಅರ್ಧಶತಕ ಪೂರೈಸುವ ಮೂಲಕ (50+ ರನ್) ಭಾರತದ ಅಗ್ರ ನಾಲ್ವರು ಬ್ಯಾಟರ್‌ಗಳ ಐತಿಹಾಸಿಕ ದಾಖಲೆಯನ್ನು ಪೂರ್ಣಗೊಳಿಸಿದರು.

ಈ ದಾಖಲೆ ಏಕೆ ವಿಶೇಷ?

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಬ್ಯಾಟರ್‌ಗಳು ಆಡಿದ್ದರೂ, SENA ದೇಶಗಳ ಒಂದೇ ಇನ್ನಿಂಗ್ಸ್‌ನಲ್ಲಿ 1 ರಿಂದ 4ನೇ ಕ್ರಮಾಂಕದ ಎಲ್ಲಾ ಬ್ಯಾಟರ್‌ಗಳು 50+ ರನ್ ಗಳಿಸಿದ ಉದಾಹರಣೆ ಇರಲಿಲ್ಲ.

ಇದಲ್ಲದೆ, ವಿದೇಶಿ ಟೆಸ್ಟ್‌ನಲ್ಲಿ ಎದುರಾಳಿ ತಂಡ 360ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ಆ ಮೊತ್ತವನ್ನು ಕೇವಲ 2 ವಿಕೆಟ್ ಕಳೆದುಕೊಂಡು  ದಾಟುವುದು ಅತ್ಯಂತ ಅಪರೂಪ. ಇದೀಗ ಅಂತಹದೊಂದು ಸಾಧನೆಯನ್ನು ಟೀಮ್ ಇಂಡಿಯಾ ಮಾಡಿ. ಈ ಮೂಲಕ 1930ರ (ಆಸ್ಟ್ರೇಲಿಯಾ vs ಇಂಗ್ಲೆಂಡ್) ಮತ್ತು 2012ರ (ಸೌತ್ ಆಫ್ರಿಕಾ vs ಇಂಗ್ಲೆಂಡ್) ನಂತರ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡವಾಗಿ ಭಾರತ ಹೊರಹೊಮ್ಮಿದೆ.

ಸದ್ಯ ಮೊದಲ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ 113 ಓವರ್​ಗಳ ಮುಕ್ತಾಯದ ವೇಳೆ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 415 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ 47 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮುಂದುವರೆಸಿದೆ.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.

ಇದನ್ನೂ ಓದಿ: ಬಾಟಲಿ ಮುಚ್ಚಳದ ಕಳ್ಳಾಟ! ಅಖ್ತರ್ ಬಾಯ್ಬಿಟ್ಟ ಸ್ಫೋಟಕ ಸತ್ಯ!

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್​ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್​ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.

Published On - 10:06 am, Sat, 21 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us