IND vs SA: ಸೋತರೂ ಬೇಜಾರಿಲ್ಲ: ಸೂರ್ಯಕುಮಾರ್ ಯಾದವ್
South Africa vs India: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ. ಹಾಗೆಯೇ ಈ ಸರಣಿಯ ಕೊನೆಯ ಪಂದ್ಯ ನವೆಂಬರ್ 15 ರಂದು ಜೋಬರ್ಗ್ನಲ್ಲಿ ಜರುಗಲಿದೆ.
ಗೆಬಹಾದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಬ್ಯಾಟರ್ಗಳ ಪಾಲಿಗೆ ಕಠಿಣವಾಗಿದ್ದ ಈ ಪಿಚ್ನಲ್ಲಿ ಹಾರ್ದಿಕ್ ಪಾಂಡ್ಯ ಅಜೇಯ 39 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿತು.
125 ರನ್ಗಳ ಸುಲಭ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ ರನ್ಗಳಿಸಲು ಪರದಾಡಿದರು. ಇದಾಗ್ಯೂ ಟ್ರಿಸ್ಟನ್ ಸ್ಟಬ್ಸ್ (47) ಅವರ ಜವಾಬ್ದಾರಿಯುತ ಇನಿಂಗ್ಸ್ನೊಂದಿಗೆ 19 ಓವರ್ಗಳಲ್ಲಿ 128 ರನ್ಗಳಿಸಿ ಸೌತ್ ಆಫ್ರಿಕಾ ತಂಡವು 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ಕಡಿಮೆ ಸ್ಕೋರ್ಗಳಿಸಿದರೂ ಬೌಲರ್ಗಳು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿ ನಮ್ಮ ತಂಡದ ಪ್ರದರ್ಶನದ ಬಗ್ಗೆಯಾಗಲಿ, ಸೋಲಿನ ಬಗ್ಗೆಯಾಗಲಿ ಯಾವುದೇ ಬೇಜಾರಿಲ್ಲ ಎಂದಿದ್ದಾರೆ.
ಟಿ20 ಪಂದ್ಯದಲ್ಲಿ ಯಾವುದೇ ತಂಡ 125 ಅಥವಾ 140 ರನ್ ಗಳಿಸಲು ಬಯಸುವುದಿಲ್ಲ. ಇದಾಗ್ಯೂ ಅತೀ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದ ನಮ್ಮ ಬೌಲರ್ಗಳ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಅದರಲ್ಲೂ 125 ರನ್ಗಳ ಗುರಿಯ ನಡುವೆ ವರುಣ್ ಚಕ್ರವರ್ತಿ 5 ವಿಕೆಟ್ಗಳನ್ನು ಕಬಳಿಸಿರುವುದು ನಿಜಕ್ಕೂ ಶ್ರೇಷ್ಠ ಪ್ರದರ್ಶನ ಎಂದು ಸೂರ್ಯಕುಮಾರ್ ಕೊಂಡಾಡಿದ್ದಾರೆ.
ಸದ್ಯ ನಾಲ್ಕು ಪಂದ್ಯಗಳ ಸರಣಿಯಲ್ಲಿ ನಾವು ಅವರು ಒಂದೊಂದು ಪಂದ್ಯಗಳನ್ನು ಗೆದ್ದಿದ್ದೇವೆ. ಇನ್ನೂ ಎರಡು ಪಂದ್ಯಗಳು ಉಳಿದಿವೆ. ಈ ಪಂದ್ಯಗಳಲ್ಲೂ ಅತ್ಯುತ್ತಮ ಮನರಂಜನೆಯನ್ನು ನಿರೀಕ್ಷಿಸಬಹುದು ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುವ ವಿಶ್ವಾಸವನ್ನು ಸಹ ಟೀಮ್ ಇಂಡಿಯಾ ನಾಯಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IND vs SA: ಸೊನ್ನೆ ಸುತ್ತಿ ಬೇಡದ ದಾಖಲೆ ಬರೆದ ಸಂಜು ಸ್ಯಾಮ್ಸನ್
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯವು ನವೆಂಬರ್ 13 ರಂದು ಸೆಂಚುರಿಯನ್ನಲ್ಲಿ ನಡೆಯಲಿದೆ. ಹಾಗೆಯೇ ಈ ಸರಣಿಯ ಕೊನೆಯ ಪಂದ್ಯ ನವೆಂಬರ್ 15 ರಂದು ಜೋಬರ್ಗ್ನಲ್ಲಿ ಜರುಗಲಿದೆ.