Prithvi Shaw: ಧವನ್ 86, ಕಿಶನ್ 59 ರನ್: ಆದ್ರೂ ಪಂದ್ಯಶ್ರೇಷ್ಠ 43 ರನ್ ಗಳಿಸಿದ ಪೃಥ್ವಿ ಶಾ: ಯಾಕೆ ಗೊತ್ತಾ?

India vs Sri lanka: ಶ್ರೀಲಂಕಾ ನೀಡಿದ್ದ 263 ರನ್​ಗಳ ಟಾರ್ಗೆಟ್ ನೀಡಿದ್ದ ಭಾರತ ಏಕದಿನ ಕ್ರಿಕೆಟ್​ನಲ್ಲಿ ಹಿಂದೆಂದೂ ಕಾಣದ ಸ್ಫೋಟಕ ಆರಂಭ ಪಡೆದುಕೊಂಡಿತು. ಇದಕ್ಕೆ ಕಾರಣ ಪೃಥ್ವಿ ಶಾ.

Prithvi Shaw: ಧವನ್ 86, ಕಿಶನ್ 59 ರನ್: ಆದ್ರೂ ಪಂದ್ಯಶ್ರೇಷ್ಠ 43 ರನ್ ಗಳಿಸಿದ ಪೃಥ್ವಿ ಶಾ: ಯಾಕೆ ಗೊತ್ತಾ?
Prithvi Shaw
Follow us
TV9 Web
| Updated By: Vinay Bhat

Updated on: Jul 19, 2021 | 9:19 AM

ಕೊಲಂಬೊದಲ್ಲಿ ನಡೆದ ಶ್ರೀಲಂಕಾ (Sri lanka) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. 7 ವಿಕೆಟ್​ಗಳ ಅಮೋಘ ಜಯಭೇರಿ ಬಾರಿಸಿದ ಶಿಖರ್ ಧವನ್ (Shikhar Dhawan) ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ  ಸಾಧಿಸಿದೆ. ಶ್ರೀಲಂಕಾ ನೀಡಿದ್ದ 263 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಧವನ್ 86, ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಇಶಾನ್ ಕಿಶನ್ (Ishan Kishan) 59 ಹಾಗೂ ಪೃಥ್ವಿ ಶಾ (Prithvi Shaw) 43 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಇನ್ನಿಂಗ್ಸ್ ಆರಂಭದಿಂದ ಅಂತ್ಯದ ವರೆಗೆ ಧವನ್ 95 ಎಸೆತಗಳಲ್ಲಿ 86 ರನ್ ಬಾರಿಸಿ ಅಜೇಯರಾಗಿ ಉಳಿದರು. ಇತ್ತ ಕಿಶನ್ ಕೇವಲ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಮೂಲಕ 59 ರನ್ ಚಚ್ಚಿದರು. ಆದರೂ ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು 43 ರನ್ ಗಳಿಸಿದ ಪೃಥ್ವಿ ಶಾ ಅವರಿಗೆ. ಅದುಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಶ್ರೀಲಂಕಾ ನೀಡಿದ್ದ 263 ರನ್​ಗಳ ಟಾರ್ಗೆಟ್ ನೀಡಿದ್ದ ಭಾರತ ಏಕದಿನ ಕ್ರಿಕೆಟ್​ನಲ್ಲಿ ಹಿಂದೆಂದೂ ಕಾಣದ ಸ್ಫೋಟಕ ಆರಂಭ ಪಡೆದುಕೊಂಡಿತು. ಇದಕ್ಕೆ ಕಾರಣ ಪೃಥ್ವಿ ಶಾ. ಮನಬಂದಂತೆ ಬ್ಯಾಟ್ ಬೀಸಿದ ಶಾ ಬೌಂಡರಿಗಳ ಮಳೆಯನ್ನೇ ಸುರಿಸಿದರು. ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಶಾ ಬ್ಯಾಟ್​ನಿಂದ ಮೊದಲ ಬೌಂಡರಿ ಸಿಡಿಯಿತು. ದುಷ್ಮಂತಾ ಚಮಿರಾ ಅವರ ಮೊದಲ ಓವರ್‌ನಲ್ಲಿ ಶಾ ಎರಡು ಬೌಂಡರಿ ಬಾರಿಸಿದರು. ನಂತರ ಮುಂದಿನ ಓವರ್‌ನಲ್ಲಿ ಇಸುರು ಉದಾನಗೆ ಎರಡು ಬೌಂಡರಿ ಬಾರಿಸಿದರೆ, 4ನೇ ಓವರ್‌ನಲ್ಲಿ ಸತತವಾಗಿ ಮೂರು ಬೌಂಡರಿ ಚಚ್ಚಿದರು.

ಇದರಿಂದಾಗಿ ಭಾರತದ ಸ್ಕೋರ್ ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಮುಂದಿನ ಓವರ್‌ನಲ್ಲೂ ಚಮಿರಾ ಅವರ ಓವರ್‌ನಲ್ಲಿ ಎರಡು ಬೌಂಡರಿ ಬಂದವು. ಆದರೆ ಕೊನೆಯ ಚೆಂಡು ಶಾ ಹೆಲ್ಮೆಟ್‌ಗೆ ಬಡಿಯಿತು. ಇದರ ನಡುವೆಯೇ ಮುಂದಿನ ಎಸೆತಕ್ಕೆ ಶಾ ಲೆಗ್​ಸೈಡ್​ನಲ್ಲಿ ಬೌಂಡರಿ ಬಾರಿಸಿದರು. ಪೃಥ್ವಿ ಶಾ ಒಂಬತ್ತು ಬೌಂಡರಿಗಳ ಸಹಾಯದಿಂದ 24 ಎಸೆತಗಳಲ್ಲಿ 43 ರನ್ ಗಳಿಸಿ ಔಟ್ ಆದರು.

ನಿನ್ನೆಯ ಪಂದ್ಯದಲ್ಲಿ ಪೃಥ್ವಿ ಶಾ ಅವರ ಸ್ಟ್ರೈಕ್​ರೇಟ್ ಬರೋಬ್ಬರಿ 179.16. ಕಿಶನ್ ಅವರದ್ದು 140.47. ಹೀಗಾಗಿ ಭಾರತಕ್ಕೆ ಸ್ಫೋಟಕ ಆರಂಭ ಒದಗಿಸಿದ ಪೃಥ್ವಿ ಶಾಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಅನೇಕ ಕ್ರಿಕೆಟ್ ಪಂಡಿತರು ಶಾ ಗೆ ಪಂದ್ಯಶ್ರೇಷ್ಠ ನೀಡಿದ್ದಕ್ಕೆ ಉತ್ತಮ ನಿರ್ಧಾರ ಎಂದಿದ್ದಾರೆ. ಅಭಿಮಾನಿಗಳು ಕೂಡ, ಏಕದಿನ ಕ್ರಿಕೆಟ್​​ನಲ್ಲಿ ಬಹಳ ಸಮಯದ ನಂತರ ಯೋಚಿಸಿ ಅತ್ಯುತ್ತಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಳೆ ಮಂಗಳವಾರ ಇದೇ ಪ್ರೆಮದಾಸ ಸ್ಟೇಡಿಯಂನಲ್ಲಿ ಎರಡನೇ ಏಕದಿನ ನಡೆಯಲಿದೆ.

IND vs SL: ಭಾರತ – ಶ್ರೀಲಂಕಾ ಮೊದಲ ಏಕದಿನ ಪಂದ್ಯದಲ್ಲಿ ನೀವು ಗಮನಿಸಿದ್ರ ಈ 5 ಅಂಶ?.

IND vs SL: ಟೀಮ್ ಇಂಡಿಯಾಕ್ಕೆ ಧವನ್ 25 ನೇ ನಾಯಕ; ಗಬ್ಬರ್ ಖಾತೆ ಸೇರಿದ ವಿಶಿಷ್ಠ ದಾಖಲೆ

(Prithvi shaw offered man of the match even after dhawan and isshan kishan perform well here is the reason)