
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (India vs England ) ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆತಿಥೇಯ ಇಂಗ್ಲೆಂಡ್‌ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ (Jacob Bethell and Ben Duckett) ಈಗಾಗಲೇ ಅರ್ಧಶತಕ ಬಾರಿಸಿದ್ದು ಶತಕದ ಸನಿಹದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತದ ಅನಾನುಭವಿ ಬೌಲಿಂಗ್ ವಿಭಾಗವನ್ನು ಸರಿಯಾಗಿ ದಂಡಿಸುತ್ತಿರುವ ಇಂಗ್ಲೆಂಡ್‌ನ ಆರಂಭಿಕರು ಮೈದಾನದಾದ್ಯಂತ ರನ್‌ಗಳ ಮಳೆ ಸುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇಂಗ್ಲೆಂಡ್ ತಂಡ 30 ಓವರ್ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 192 ರನ್‌ಗಳ ಜೊತೆಯಾಟವನ್ನಾಡಿದೆ.
ಈ ಪಂದ್ಯದಲ್ಲಿ, ಇಂಗ್ಲೆಂಡ್‌ನ ಆರಂಭಿಕ ಜೋಡಿ ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಮೊದಲ ವಿಕೆಟ್‌ಗೆ 192 ರನ್‌ಗಳ ದಾಖಲೆಯ ಪಾಲುದಾರಿಕೆಯನ್ನು ನೀಡಿದರು. ಈ ಸರಣಿಯಲ್ಲಿ ಇಂಗ್ಲೆಂಡ್ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿತು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಜೊತೆಯಾಟ ಮೂಡಿಬಂದಿರಲಿಲ್ಲ. ಆದರೆ ಲಾರ್ಡ್ಸ್‌ನಲ್ಲಿ ಇವರಿಬ್ಬರ ಜೊತೆಯಾಟ ಭಾರತ ತಂಡದ ವಿರುದ್ಧದ 36 ವರ್ಷಗಳ ಬರಗಾಲವನ್ನು ಕೊನೆಗೊಳಿಸಿತು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 36 ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತದ ವಿರುದ್ಧ ಇಂಗ್ಲಿಷ್ ಆರಂಭಿಕ ಜೋಡಿ ಶತಕದ ಪಾಲುದಾರಿಕೆಯನ್ನು ದಾಖಲಿಸಿದ್ದು ಇದೇ ಮೊದಲು. ಲಾರ್ಡ್ಸ್‌ನಲ್ಲಿ ಒಟ್ಟಾರೆ ದಾಖಲೆಯ ಬಗ್ಗೆ ಮಾತನಾಡಿದರೆ, 2010 ರ ನಂತರ ಇಬ್ಬರು ಇಂಗ್ಲಿಷ್ ಆರಂಭಿಕ ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 100 ಕ್ಕೂ ಹೆಚ್ಚು ರನ್‌ಗಳನ್ನು ಸೇರಿಸಿದ್ದು ಇದೇ ಮೊದಲು. ಇದಕ್ಕೂ ಮೊದಲು, ಸೆಪ್ಟೆಂಬರ್ 2010 ರಲ್ಲಿ, ಆಂಡ್ರ್ಯೂ ಸ್ಟ್ರಾಸ್ ಮತ್ತು ಸ್ಟೀವನ್ ಡೇವಿಸ್ ಅವರ ಆರಂಭಿಕ ಜೋಡಿ ಪಾಕಿಸ್ತಾನದ ವಿರುದ್ಧ 113 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಗಳಿಸಿತ್ತು.
IND vs ENG: 3 ಪಂದ್ಯಗಳಲ್ಲೂ ಟಾಸ್ ಸೋತ ಗಿಲ್; ಭಾರತ ತಂಡದಲ್ಲಿ 3 ಬದಲಾವಣೆ
ಆದಾಗ್ಯೂ 31ನೇ ಓವರ್ನ ಮೊದಲ ಎಸೆತದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಆರಂಭಿಕ ಜೊತೆಯಾಟಕ್ಕೆ ಅಂತ್ಯಹಾಡಿದರು. ಶತಕದ ಸನಿಹದಲ್ಲಿ ಜಾಕೋಬ್ ಬೆಥೆಲ್ ಅವರನ್ನು ಪ್ರಸಿದ್ಧ್ ಔಟ್ ಮಾಡಿದರು. ಬೆಥೆಲ್ ಈ ಪಂದ್ಯದಲ್ಲಿ 93 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 91 ರನ್ ಬಾರಿಸಿ ಔಟಾದರು.
Published On - 5:57 pm, Sun, 19 July 26