
ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ 27 ರನ್‌ಗಳಿಂದ ಸೋತಿತು. ಈ ಸೋಲಿನೊಂದಿಗೆ ತಂಡ ಸರಣಿ ಕೂಡ ಕಳೆದುಕೊಂಡಿತು. ಇಂಗ್ಲೆಂಡ್ ನೀಡಿದ 388 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ನಾಯಕ ಶುಭ್ಮನ್ ಗಿಲ್ ಹಾಗೂ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಗೆಲುವಿಗಾಗಿ ಹೋರಾಟ ನೀಡಿದರೂ, ಯುವ ಆಟಗಾರರ ಕಳಪೆ ಬ್ಯಾಟಿಂಗ್ನಿಂದಾಗಿ ತಂಡ ಸೋಲಿಗೆ ಕೊರಳೊಡ್ಡಬೇಕಾಯಿತು. ಇದೀಗ ತಂಡದ ಯುವ ಆಟಗಾರರ ಬೇಜವಾಬ್ದಾರಿಯುತ ಬ್ಯಾಟಿಂಗ್ಗೆ ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಂಡದ ಸೋಲಿಗೆ ಪ್ರತಿಕ್ರಿಯಿಸಿದ ಸೌರವ್ ಗಂಗೂಲಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯುವ ಆಟಗಾರರು ಯಾವಾಗಲೂ ಹಿರಿಯರ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ‘ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರತಿ ಬಾರಿಯೂ ಪಂದ್ಯಗಳನ್ನು ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ಸರಿಯಲ್ಲ. ಈ ಇಬ್ಬರು ನಾಳೆ ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾದ ಗತಿ ಏನಾಗಬಹುದು? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಬೇಜವಾಬ್ದಾರಿಯಿಂದ ಆಡುತ್ತಿರುವುದು ನಿರಾಶಾದಾಯಕವಾಗಿದೆ. ನಮ್ಮ ಹುಡುಗರಲ್ಲಿ ಒಬ್ಬರು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅವರಂತೆ ಮಿಂಚಿನ ಇನ್ನಿಂಗ್ಸ್ ಆಡಿದ್ದರೆ, ಗೆಲುವು ನಮ್ಮದಾಗುತ್ತಿತ್ತು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಯುವ ಆಟಗಾರರು ಜವಾಬ್ದಾರಿಯುತವಾಗಿ ಆಡಲು ಕಲಿಯಬೇಕು’ ಎಂದು ಗಂಗೂಲಿ ಹೇಳಿದ್ದಾರೆ.
ಸೌರವ್ ಗಂಗೂಲಿ ನೀಡಿದ ಹೇಳಿಕೆ ಅಕ್ಷರಶಃ ಸತ್ಯವಾಗಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕ್ರೀಸ್ನಲ್ಲಿ ಇರುವವರೆಗೂ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಕಲೆಹಾಕುವಂತೆ ತೋರುತ್ತಿತ್ತು. ಆದರೆ ಕೊಹ್ಲಿ ವಿಕೆಟ್ ಪತನದೊಂದಿಗೆ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಹೀಗಾಗಿ ಒಂದು ಹಂತದಲ್ಲಿ 300 ರನ್ಗಳನ್ನು ಕಲೆಹಾಕುವ ಸೂಚನೆ ನೀಡಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ಕೇವಲ 233 ರನ್ಗಳಿಗೆ ಅಂತ್ಯವಾಯಿತು.
ರೋಹಿತ್- ಕೊಹ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ? ಇಲ್ಲಿದೆ ಏಕದಿನ ಸರಣಿಗಳ ವೇಳಾಪಟ್ಟಿ
ಮೂರನೇ ಏಕದಿನ ಪಂದ್ಯದಲ್ಲೂ ರೋಹಿತ್, ಕೊಹ್ಲಿ ಆಡುತ್ತಿರುವಾಗ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ರೋಹಿತ್ ವಿಕೆಟ್ ಪತನದ ಬಳಿಕ ಕೊಹ್ಲಿಗೆ ಯಾರು ಸಾಥ್ ನೀಡಲಿಲ್ಲ. ಇತ್ತ ಕೊಹ್ಲಿ ಏಕಾಂಗಿ ಹೋರಾಟ ನೀಡಲು ಹೋಗಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ಗೆಲುವು ಖಚಿತವಾಯಿತು. ಹೀಗಾಗಿ ಗಂಗೂಲಿ ಹೇಳಿಕೆಯಂತೆ ತಂಡದ ಇತರ ಬ್ಯಾಟರ್ಗಳು ಅದರಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವವರು ಹೋರಾಟದ ಮನೋಭಾವದೊಂದಿಗೆ ಕಣಕ್ಕಿಳಿಯಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ