Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ಸ್ಟಾರ್ ವೇಗಿ ಔಟ್

India's England Tour: ಭಾರತ ತಂಡ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ನಡುವೆ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ವೇಗದ ಬೌಲರ್ ಓಲಿ ಸ್ಟೋನ್ ಮೊಣಕಾಲಿನ ಗಾಯದಿಂದಾಗಿ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದು ಇಂಗ್ಲೆಂಡ್‌ನ ಬೌಲಿಂಗ್ ದಾಳಿಯ ಮೇಲೆ ಒತ್ತಡ ಹೆಚ್ಚಿಸಿದೆ. ಈಗಾಗಲೇ ಮಾರ್ಕ್ ವುಡ್ ಮತ್ತು ಬ್ರೈಡನ್ ಕಾರ್ಸ್ ಗಾಯದಿಂದ ಬಳಲುತ್ತಿದ್ದಾರೆ.

IND vs ENG: ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ಸ್ಟಾರ್ ವೇಗಿ ಔಟ್
England Team
Follow us
ಪೃಥ್ವಿಶಂಕರ
|

Updated on:Apr 04, 2025 | 6:11 PM

ಪ್ರಸ್ತುತ ಐಪಿಎಲ್​ನಲ್ಲಿ (IPL 2025) ನಿರತರಾಗಿರುವ ಟೀಂ ಇಂಡಿಯಾ ಆಟಗಾರರು ಐಪಿಎಲ್ ಮುಗಿದ ಬಳಿಕ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಉಭಯ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಜೂನ್ 20 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಸರಣಿಗೂ ಮುನ್ನ ಇಂಗ್ಲೆಂಡ್ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಓಲೀ ಸ್ಟೋನ್ ಮೊಣಕಾಲಿನ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಶುಕ್ರವಾರ ಇದನ್ನು ದೃಢಪಡಿಸಿದ್ದು, ಅವರು ಮೊಣಕಾಲಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಹಾಗೆಯೇ ಆಗಸ್ಟ್ 2025 ರ ವೇಳೆಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಔಟ್

ವೇಗದ ಬೌಲರ್ ಸ್ಟೋನ್ ಇಂಗ್ಲೆಂಡ್ ಪರ 5 ಟೆಸ್ಟ್ ಮತ್ತು 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಈಗ ಅವರು ಭಾರತದ ವಿರುದ್ಧದ ಐದು ಪಂದ್ಯಗಳ ಸರಣಿಗೆ ಲಭ್ಯವಿರುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದ ಸ್ಟೋನ್, ಇಂಗ್ಲೆಂಡ್ ಪರ 17 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇಂಗ್ಲೆಂಡ್​ಗೆ ಇಂಜುರಿ ಸಮಸ್ಯೆ

2019 ರಲ್ಲಿ ಲಾರ್ಡ್ಸ್‌ನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಓಲ್ಲಿ ಸ್ಟೋನ್, ಆ ನಂತರ ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದರು. ಓಲೀ ಸ್ಟೋನ್ ಗಾಯಗೊಂಡಿರುವುದು ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ದಾಳಿಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾರ್ಕ್ ವುಡ್ ಈಗಾಗಲೇ ನಾಲ್ಕು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದಾರೆ, ಆದರೆ ವುಡ್ ಅವರ ಡರ್ಹ್ಯಾಮ್ ತಂಡದ ಸಹ ಆಟಗಾರ ಬ್ರೈಡನ್ ಕಾರ್ಸ್ ದೀರ್ಘಕಾಲದ ಕಾಲ್ಬೆರಳ ಗಾಯದಿಂದ ಬಳಲುತ್ತಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಮಂಡಿರಜ್ಜು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಜಿಂಬಾಬ್ವೆ ಟೆಸ್ಟ್‌ಗೆ ಮುನ್ನ ಫಿಟ್ ಆಗುವ ನಿರೀಕ್ಷೆಯಿದೆ.

ಐಪಿಎಲ್‌ ನಡುವೆ ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ನಿಧನ

ಭಾರತ- ಇಂಗ್ಲೆಂಡ್ ಟೆಸ್ಟ್ ವೇಳಾಪಟ್ಟಿ

ಭಾರತ ತಂಡ ಜೂನ್ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ 24 ರವರೆಗೆ ಲೀಡ್ಸ್‌ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಜುಲೈ 2 ರಿಂದ ಜುಲೈ 6 ರವರೆಗೆ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 10 ರಿಂದ 14 ರವರೆಗೆ ಲಂಡನ್‌ನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ 27 ರವರೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಐದನೇ ಟೆಸ್ಟ್ ಪಂದ್ಯ ಜುಲೈ 31 ರಿಂದ ಆಗಸ್ಟ್ 4 ರವರೆಗೆ ಲಂಡನ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Fri, 4 April 25