ವಿದ್ಯುತ್ ಕಡಿತ ನಂತರ ಧರ್ಮಶಾಲಾದಲ್ಲಿ ಏನಾಯಿತು?: ಇಂಚಿಂಚು ಮಾಹಿತಿ ತೆರೆದಿಟ್ಟ ಮಿಚೆಲ್ ಸ್ಟಾರ್ಕ್ ಪತ್ನಿ
Mitchell Starc wife Alyssa Healy IPL 2025: ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗ ಮತ್ತು ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಅಲಿಸಾ ಹೀಲಿ, ಧರ್ಮಶಾಲಾದಲ್ಲಿ ವಿದ್ಯುತ್ ಕಡಿತಗೊಂಡಾಗ ವಾತಾವರಣ ಹೇಗಿತ್ತು ಎಂಬುದನ್ನು ಪಾಡ್‌ಕ್ಯಾಸ್ಟ್‌ನಲ್ಲಿ ವಿವರಿಸಿದ್ದಾರೆ. ಎಲ್ಲಾ ಆಟಗಾರರನ್ನು ಕ್ರೀಡಾಂಗಣದಿಂದ ಹೋಟೆಲ್‌ಗೆ ಸುರಕ್ಷಿತವಾಗಿ ಹೇಗೆ ಸಾಗಿಸಲಾಯಿತು ಎಂಬುದನ್ನು ಹೇಳಿದ್ದಾರೆ.

ಬೆಂಗಳೂರು (ಮೇ. 14): ಭಾರತ ಮತ್ತು ಪಾಕಿಸ್ತಾನ (India Pakistan) ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಅನ್ನು ಒಂದು ವಾರ ಸ್ಥಗಿತಗೊಳಿಸಲಾಯಿತು. ಆದಾಗ್ಯೂ, ಈಗ ಪಂದ್ಯಾವಳಿ ಮತ್ತೊಮ್ಮೆ ಪ್ರಾರಂಭಕ್ಕೆ ಸಜ್ಜಾಗಿದೆ. ಈ ಋತುವಿನ ಐಪಿಎಲ್‌ನ ಎರಡನೇ ಭಾಗವು ಮೇ 17 ರಂದು ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ಆಡುತ್ತಿದ್ದಾಗ ಐಪಿಎಲ್ ಅನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಪಂಜಾಬ್ ತಂಡದ ಇನ್ನಿಂಗ್ಸ್‌ನ 10.1 ಓವರ್ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಫ್ಲಡ್ ಲೈಟ್‌ಗಳನ್ನು ಆಫ್ ಮಾಡಲಾಯಿತು. ಕೆಲವು ನಿಮಿಷಗಳ ನಂತರ, ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಮರಳಿದರು ಮತ್ತು ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಶಾಂತಿಯುತವಾಗಿ ಹೊರಹೋಗುವಂತೆ ಕೇಳಲಾಯಿತು.
ಪಂದ್ಯ ಹಠಾತ್ತನೆ ಸ್ಥಗಿತಗೊಂಡಿದ್ದರಿಂದ ಎಲ್ಲರೂ ತುಂಬಾ ಭಯಭೀತರಾಗಿದ್ದರು. ವಿಶೇಷವಾಗಿ ವಿದೇಶಿ ಆಟಗಾರರಲ್ಲಿ ಬಹಳಷ್ಟು ಆತಂಕ ಮೂಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗ ಮತ್ತು ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಅಲಿಸಾ ಹೀಲಿ, ಧರ್ಮಶಾಲಾದಲ್ಲಿ ವಿದ್ಯುತ್ ಕಡಿತಗೊಂಡಾಗ ವಾತಾವರಣ ಹೇಗಿತ್ತು ಎಂಬುದನ್ನು ಪಾಡ್‌ಕ್ಯಾಸ್ಟ್‌ನಲ್ಲಿ ವಿವರಿಸಿದ್ದಾರೆ. ಎಲ್ಲಾ ಆಟಗಾರರನ್ನು ಕ್ರೀಡಾಂಗಣದಿಂದ ಹೋಟೆಲ್‌ಗೆ ಸುರಕ್ಷಿತವಾಗಿ ಹೇಗೆ ಸಾಗಿಸಲಾಯಿತು ಎಂಬುದನ್ನು ಹೇಳಿದ್ದಾರೆ. ಅಂದಹಾಗೆ ಐಪಿಎಲ್ 2025 ರಲ್ಲಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದು, ಈಗ ಅವರು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ.
ಧರ್ಮಶಾಲಾ ಘಟನೆಯ ಬಗ್ಗೆ ಅಲಿಸಾ ಹೀಲಿ ಹೇಳಿದ್ದೇನು?
“ಇದು ಒಂದು ವಿಚಿತ್ರ ಅನುಭವವಾಗಿತ್ತು” ಎಂದು ಅಲಿಸಾ ಹೀಲಿ ಧರ್ಮಶಾಲಾದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಹೇಳಿದರು. ಇದ್ದಕ್ಕಿದ್ದಂತೆ ಕೆಲವು ಲೈಟ್ಗಳಿ ಆರಿಹೋದವು, ಆಗ ನಾವು ಮಹಡಿಯ ಮೇಲೆ ನಿಂತಿದ್ದೆವು. ನಂತರ ನಮ್ಮನ್ನು ಹುಡುಕಿಕೊಂಡ ಒರ್ವ ವ್ಯಕ್ತಿ ಬಂದನು. ಅವನ ಮುಖದಲ್ಲಿ ಆತಂಕವಿತ್ತು. ನಾವು ಈಗ ಇಲ್ಲಿಂದ ಕೂಡಲೇ ಹೊರಡಬೇಕು ಎಂದು ಅವರು ಹೇಳಿದರು. ಆದರೆ, ಯಾರಿಗೂ ಏನೂ ವಿಚಾರ ಎಂದು ಹೇಳಲಿಲ್ಲ. ನಂತರ ನಮ್ಮನ್ನು ಎಲ್ಲಾ ಆಟಗಾರರು ಇದ್ದ ಕೋಣೆಗೆ ಕರೆದೊಯ್ಯಲಾಯಿತು. ಫಾಫ್ ಡು ಪ್ಲೆಸಿಸ್ ಶೂಗಳನ್ನು ಸಹ ಧರಿಸಿರಲಿಲ್ಲ.
IPL 2025: ಆರ್ಸಿಬಿಗೆ ದೊಡ್ಡ ನಷ್ಟ: ಯಾವ ತಂಡದಿಂದ ಎಷ್ಟು ಆಟಗಾರರು ಐಪಿಎಲ್ನಿಂದ ಔಟ್?, ಇಲ್ಲಿದೆ ಸಂಪೂರ್ಣ ಮಾಹಿತಿ
ಮಿಚೆಲ್ ಸ್ಟಾರ್ಕ್ ಈ ವಿಷಯದ ಗಂಭೀರತೆಯ ಬಗ್ಗೆ ಹೇಳಿದಾಗ ನಾನು ತುಂಬಾ ಭಯಭೀತನಾದೆ. ನಗರದಿಂದ 60 ಕಿಲೋಮೀಟರ್ ದೂರದಲ್ಲಿ ಕೆಲವು ಕ್ಷಿಪಣಿಗಳಿಂದ ದಾಳಿ ನಡೆದಿದೆ, ಆದ್ದರಿಂದ ವಿದ್ಯುತ್ ಕಡಿತಗೊಂಡಿದೆ ಎಂದು ಸ್ಟಾರ್ಕ್ ತಿಳಿಸಿದರು. ಈ ಘಟನೆ ನಡೆದ ಸಮಯದಲ್ಲಿ, ಧರ್ಮಶಾಲಾ ಕ್ರೀಡಾಂಗಣವು ಉರಿಯುತ್ತಿರುವ ದೀಪದಂತೆ ಕಾಣುತ್ತಿತ್ತು ಎಂದು ಹೇಳಿದ್ದಾರೆ.
ಮೇ 8 ರಂದು ಪಾಕಿಸ್ತಾನವು ಧರ್ಮಶಾಲಾದ ಪಕ್ಕದಲ್ಲಿರುವ ಪಠಾಣ್‌ಕೋಟ್ ಬಳಿ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿತ್ತು. ಇದರಿಂದಾಗಿ ಗಡಿಗೆ ಹೊಂದಿಕೊಂಡ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತೀಯ ಪಡೆಗಳು ವಿಫಲಗೊಳಿಸಿದ್ದವು. ಧರ್ಮಶಾಲಾ ನಗರವು ಪಠಾಣ್‌ಕೋಟ್‌ಗೆ ಬಹಳ ಹತ್ತಿರದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ನಿಲ್ಲಿಸುವ ನಿರ್ಧರ ತೆಗೆದುಕೊಳ್ಳಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




