ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಕೈಚೆಲ್ಲಿರುವ ಕೆಎಲ್ ರಾಹುಲ್ (KL Rahul) ನೇತೃತ್ವದ ಭಾರತ ತಂಡ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಕೇಪ್ಟೌನ್ನ ನ್ಯೂಲೆಂಡ್ಸ್ ಮೈದಾನದಲ್ಲಿ ಅಂತಿಮ ಏಕದಿನ ನಡೆಯಲಿದ್ದು ವೈಟ್ವಾಷ್ ಅವಮಾನದಿಂದ ಪಾರಾಗುವುದು ಹೇಗೆ ಎಂಬ ಚಿಂತೆಯಲ್ಲಿದೆ. ಯಾಕಂದ್ರೆ ಭಾರತದ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಬ್ಯಾಟರ್ಗಳು ಮಧ್ಯಮ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸುತ್ತಿದ್ದರೆ, ಇತ್ತ ಬೌಲರ್ಗಳು ಮಧ್ಯಮ ಓವರ್ಗಳಲ್ಲಿ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಈ ಹಿಂದಿನ ಎರಡೂ ಪಂದ್ಯ ಸೋಲಲು ಇದೇ ಕಾರಣ. ಆಫ್ರಿಕಾ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟಲು ಹರಸಾಹಸ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಎರಡು ಏಕದಿನ ಪಂದ್ಯಗಳಲ್ಲಿ ಭಾರತೀಯ ಬೌಲರ್ಗಳು ಪಡೆದಿದ್ದು ಆಫ್ರಿಕಾದ ಕೇವಲ 6 ವಿಕೆಟ್ಗಳನ್ನು ಮಾತ್ರ. ಹೀಗಾಗಿ ಇಂದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ (India Playing XI) ಬದಲಾವಣೆ ಖಚಿತ.
ಹೌದು, ಟೀಮ್ ಇಂಡಿಯಾ ಮೂರನೇ ಏಕದಿನ ಪಂದ್ಯಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ. ಭಾರತ ಪರ ಓಪನರ್ಗಳಾಗಿ ಶಿಖರ್ ಧವನ್ ಜೊತೆ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಅನುಮಾನ. ಯಾಕಂದ್ರೆ ರಾಹುಲ್ ಏಕದಿನ ಕ್ರಿಕೆಟ್ನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ಇವರು 5ನೇ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ. ಇತ್ತ ಅವಕಾಶಕ್ಕಾಗಿ ಕಾಯುತ್ತಿರುವ ರುತುರಾಜ್ ಗಾಯಕ್ವಾಡ್ಗೆ ಸ್ಥಾನ ನೀಡಿ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಕೊಹ್ಲಿ ನಾಯಕತ್ವ ಬಿಟ್ಟ ನಂತರ ಬ್ಯಾಟಿಂಗ್‌ನಲ್ಲಿ ಹೇಗೆ ಮಿಂಚುತ್ತಾರೆ ಎಂಬ ಕುತೂಹಲ ಮೊದಲ ಪಂದ್ಯದಲ್ಲಿ ನೋಡಿದ್ದೆವು. ಆದರೆಮ 2ನೇ ಪಂದ್ಯದಲ್ಲಿ ಸೊನ್ನೆಸುತ್ತಿದ್ದರು. ಹೀಗಾಗಿ ಇಂದಿನ ಕದನದ ಮೇಲೆ ಇವರ ಬ್ಯಾಟಿಂಗ್ನಿಂದ ಸಾಕಷ್ಟು ನಿರೀಕ್ಷೆಗಳಿವೆ. ಭಾರತಕ್ಕೆ ತಲೆನೋವಾಗಿರುವುದು 4ನೇ ಕ್ರಮಾಂಕ. ಕೊಹ್ಲಿ ನಾಯಕತ್ವದ ದಿನಗಳಲ್ಲೂ ಇದ್ದ ಈ ಸಮಸ್ಯೆ ಕೆಎಲ್ ರಾಹುಲ್ ಅವರ ಹಂಗಾಮಿ ಸಾರಥ್ಯದಲ್ಲೂ ಮುಂದುವರಿದಿದೆ. ಶ್ರೇಯಸ್ ಅಯ್ಯರ್ ಆಡಿದ ಎರಡೂ ಪಂದ್ಯಗಳಲ್ಲಿ ಕೈಕೊಟ್ಟಿದ್ದಾರೆ. ಇಂದು ಅಯ್ಯರ್ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಸಾಧ್ಯತೆ ದಟ್ಟವಾಗಿದೆ.
ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ. ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಎರಡು ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಕೂಡ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಹೀಗಾಗಿ ಇವರ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ.
ಸ್ಪಿನ್ನರ್ಗಳು ಕೂಡ ಈ ಪಿಚ್ನಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಮುಖವಾಗಿ ಆರ್. ಅಶ್ವಿನ್ ಕೈಚಳಕ ನಡೆಯುತ್ತಿಲ್ಲ. ಹೀಗಾಗಿ ಇವರ ಜಾಗದಲ್ಲಿ ಆಲ್ರೌಂಡರ್ ಜಯಂತ್ ಯಾದವ್ ಅವರನ್ನು ನಿರೀಕ್ಷಿಸಲಾಗಿದೆ. ಯುಜ್ವೇಂದ್ರ ಚಹಾಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಶಾರ್ದೂಲ್ ಥಾಕೂರ್ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರೂ ಬ್ಯಾಟಿಂಗ್‌ನಲ್ಲಿ ನೆರವು ನೀಡುತ್ತಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಸ್ಥಾನ ಕಳೆದುಕೊಳ್ಳುವುದು ಖಚಿತ. ಇವರ ಜಾಗಕ್ಕೆ ದೀಪಕ್ ಚಹರ್ ಅಥವಾ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI:
ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಜಯಂತ್ ಯಾದವ್, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
U19 World cup: ದಾಖಲೆ ಬರೆದ ರಾಜ್ ಬಾವಾ: ಭಾರತಕ್ಕೆ 326 ರನ್ಗಳ ಗೆಲುವು, ಕಲೆಹಾಕಿದ ರನ್ ಎಷ್ಟು ಗೊತ್ತೇ?
South Africa vs India: ಇಂದು ಅಂತಿಮ ಏಕದಿನ: ಮೂರನೇ ಪಂದ್ಯ ಗೆದ್ದು ವೈಟ್ವಾಷ್ನಿಂದ ಪಾರಾಗುವತ್ತ ಭಾರತ ಚಿತ್ತ