IND vs SL: ಪಡಿಕ್ಕಲ್ ಅಜೇಯ 142 ರನ್; ಆತಿಥೇಯರಿಗೆ 6 ರನ್ ಮುನ್ನಡೆ

India vs Sri Lanka XI Day 2 highlights: ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ಎರಡನೇ ದಿನ ದೇವದತ್ ಪಡಿಕ್ಕಲ್ 142* ರನ್ ಗಳಿಸಿ ಮಿಂಚಿದರು. ಆರಂಭಿಕ ಆಘಾತದ ಬಳಿಕ ಕೆ.ಎಲ್. ರಾಹುಲ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು. ಅಂತಿಮವಾಗಿ ಗುರ್ನೂರ್ ಬ್ರಾರ್ ಅವರ ಸ್ಪೋಟಕ 36 ರನ್ ನೆರವಿನಿಂದ ಭಾರತ 357 ರನ್ ಗಳಿಸಿ, ಲಂಕಾ ಮುನ್ನಡೆಯನ್ನು 6 ರನ್​ಗಳಿಗೆ ಕಡಿತಗೊಳಿಸಿತು. ಮೂರನೇ ದಿನ 45 ಓವರ್‌ಗಳಲ್ಲಿ ಗೆಲುವು ನಿರ್ಧಾರವಾಗಲಿದೆ.

IND vs SL: ಪಡಿಕ್ಕಲ್ ಅಜೇಯ 142 ರನ್; ಆತಿಥೇಯರಿಗೆ 6 ರನ್ ಮುನ್ನಡೆ
Team India

Updated on: Aug 08, 2026 | 7:00 PM

ಮೂರು ದಿನಗಳ ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka XI) ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಎರಡು ದಿನಗಳ ಆಟ ಮುಗಿದಿದೆ. ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಎರಡನೇ ದಿನದಾಟದ ಅಂತ್ಯದ ವೇಳೆಗೆ, ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದೆ. ಆದಾಗ್ಯೂ ಭಾರತ ಪ್ರಸ್ತುತ ಮೊದಲ ಇನ್ನಿಂಗ್ಸ್ ಆರು ರನ್‌ಗಳ ಹಿನ್ನಡೆ ಅನುಭವಿಸಿದೆ. ಇದೀಗ ಮೂರನೇ ದಿನದಾಟದಲ್ಲಿ 90 ಓವರ್​ಗಳ ಆಟ ಬಾಕಿ ಇದೆ. ಆದರೆ ಈ 90 ಓವರ್​ಗಳನ್ನು ಒಂದೇ ತಂಡ ಆಡುವುದಿಲ್ಲ. ಬದಲಿಗೆ ಉಭಯ ತಂಡಗಳಿಗೆ ತಲಾ 45 ಓವರ್​ಗಳನ್ನು ನೀಡಲಾಗುತ್ತದೆ. ಅದರಲ್ಲಿ ಮುನ್ನಡೆ ಸಾಧಿಸುವ ತಂಡಕ್ಕೆ ಗೆಲುವು ಸಿಗಲಿದೆ.

2ನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ

ಎರಡನೇ ದಿನದಾಟದಂದು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಅರಂಭ ಸಿಗಲಿಲ್ಲ. ರಂಭಿಕ ಯಶಸ್ವಿ ಜೈಸ್ವಾಲ್ ಖಾತೆಯನ್ನು ತೆರೆಯದೆ ಕೇವಲ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ನಾಯಕ ರಾಹುಲ್ ಜೊತೆಗೆ ಎರಡನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ನಾಯಕ ರಾಹುಲ್ 40 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಪಡಿಕ್ಕಲ್ ಶತಕ, ಜಡೇಜಾ ಅರ್ಧಶತಕ

ರಾಹುಲ್ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಪಡಿಕ್ಕಲ್ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು. ರಾಹುಲ್ ವಿಕೆಟ ಪತನದ ಬಳಿಕ ಬಂದ ಅನುಭವಿ ರವೀಂದ್ರ ಜಡೇಜಾ ಕೂಡ ಅಜೇಯ 63 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ತಂಡದಲ್ಲಿರುವ ಇಬ್ಬರು ವಿಕೆಟ್​ ಕೀಪರ್​ಗಳಾದ ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಪಂತ್ 2 ರನ್​ಗೆ ವಿಕೆಟ್ ಒಪ್ಪಿಸಿದರೆ, ಜುರೇಲ್ ಇನ್ನಿಂಗ್ಸ್ 1 ರನ್​ಗೆ ಅಂತ್ಯವಾಯಿತು.

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್

ಗುರ್ನೂರ್ ಬ್ರಾರ್ ಸ್ಫೋಟಕ ಬ್ಯಾಟಿಂಗ್

ಆದಾಗ್ಯೂ ತಂಡದ ಪರ ಅಮೋಘ ಇನ್ನಿಂಗ್ಸ್ ಆಡಿದ ದೇವದತ್ ಪಡಿಕ್ಕಲ್ ಎರಡನೇ ದಿನದ ಆಟದ ಅಂತ್ಯಕ್ಕೆ 142 ರನ್ ಗಳಿಸಿ ಅಜೇಯರಾಗಿ ಉಳಿದರು. ತಮ್ಮ ಇನ್ನಿಂಗ್ಸ್​ನಲ್ಲಿ 164 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 18 ಬೌಂಡರಿ ಕೂಡ ಬಾರಿಸಿದರು. ಸ್ಪಿನ್ ಆಲ್‌ರೌಂಡರ್ ಮಾನವ್ ಸುತಾರ್ ಕೂಡ ತಂಡಕ್ಕೆ 41 ರನ್‌ಗಳ ಕೊಡುಗೆ ನೀಡಿದರೆ, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ರನ್ ಗಳಿಸಿದರು. ಕೊನೆಯಲ್ಲಿ ಗುರ್ನೂರ್ ಬ್ರಾರ್ 18 ಎಸೆತಗಳಲ್ಲಿ 36 ರನ್ ಗಳಿಸಿ ಅಜೇಯರಾಗಿ ಉಳಿದು ಶ್ರೀಲಂಕಾದ ಮುನ್ನಡೆಯನ್ನು ಕಡಿಮೆ ಮಾಡಿದರು. ಕೊನೆಯ ಓವರ್​ನಲ್ಲಿ ಬ್ರಾರ್ 4 ಸಿಕ್ಸರ್ ಬಾರಿಸಿದ್ದು, ಅವರಲ್ಲಿ ಬ್ಯಾಟಿಂಗ್‌ ಕೌಶಲ್ಯವಿದೆ ಎಂಬುದನ್ನು ಸಾಭೀತುಪಡಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sat, 8 August 26

Loading...
Unable to load recommendations.
Follow Us