T20 World Cup 2024: ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಬಲಿಷ್ಠ ಭಾರತ ತಂಡವನ್ನು (India T20 Squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ (Rohit Sharma) ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಹಾಗೆಯೆ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಪರ ಭರ್ಜರಿ ಪ್ರದರ್ಶನ ನೀಡಿರುವ ಶಿವಂ ದುಬೆಗೂ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿದೆ.
ಮತ್ತೊಂದೆಡೆ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅಂದರೆ 15 ಸದಸ್ಯರ ತಂಡದಿಂದ ಯಾರಾದರು ಹೊರಬಿದ್ದರೆ ಈ ನಾಲ್ವರು ಆಟಗಾರರಿಂದ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಇದಾಗ್ಯೂ ಈ ಬಳಗದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ಗೆ ಸ್ಥಾನ ಕಲ್ಪಿಸಲಾಗಿಲ್ಲ.
ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ವೇಗದ ಬೌಲಿಂಗ್ನೊಂದಿಗೆ ಮಿಂಚಿದ್ದ ಮಯಾಂಕ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಬದಲಾಗಿ ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡಲಾಗಿದೆ.
ಇನ್ನು ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ಸ್ಥಾನ ಪಡೆದರೆ, ಸ್ಪಿನ್ ಆಲ್ರೌಂಡರ್ಗಳಾಗಿ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಂಡದಲ್ಲಿದ್ದಾರೆ. ಹಾಗೆಯೇ ವೇಗದ ಬೌಲಿಂಗ್ ಆಲ್ರೌಂಡರ್ಗಳಾಗಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: T20I World Cup 2024: ಟಿ20 ವಿಶ್ವಕಪ್ಗೆ ಸೌತ್ ಆಫ್ರಿಕಾ ತಂಡ ಪ್ರಕಟ
ಭಾರತ ವಿಶ್ವಕಪ್ ತಂಡದಲ್ಲಿ ಟಾಪ್-4 ಬ್ಯಾಟರ್ಗಳಾಗಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಇಲ್ಲಿ ಹಿಟ್ಮ್ಯಾನ್ ಜೊತೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿದರೆ, ಕಿಂಗ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಕಣಕ್ಕಿಳಿಯುವುದು ಖಚಿತ. ಇನ್ನು ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರಾ ಅಥವಾ ಶಿವಂ ದುಬೆಗೆ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ. ಅದರಂತೆ ಟೀಮ್ ಇಂಡಿಯಾದ ಬಲಿಷ್ಠ ಬಳಗ ಈ ಕೆಳಗಿನಂತಿದೆ.
ಭಾರತ ಟಿ20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
Published On - 3:51 pm, Tue, 30 April 24