
ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವೆ ಇದೇ ಜೂನ್ 20 ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾ ಇಂಗ್ಲೆಂಡ್ ತಲುಪಿದ್ದು, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಇದು ಮಾತ್ರವಲ್ಲದೆ ಭಾರತ ಅಂಡರ್-19 (India U19 Squad) ತಂಡ ಕೂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದು, ಭಾರತ ಹಾಗೂ ಇಂಗ್ಲೆಂಡ್ ಅಂಡರ್-19 ತಂಡಗಳ ನಡುವೆ ಒಟ್ಟು 8 ಪಂದ್ಯಗಳು ನಡೆಯಲ್ಲಿವೆ. ಉಭಯ ತಂಡಗಳ ಈ ಮುಖಾಮುಖಿ ಜೂನ್ 24 ರಿಂದ ಆರಂಭವಾಗಲಿದೆ. ಆದರೆ ಈ ಪ್ರವಾಸಕ್ಕೂ ಮುನ್ನ ಭಾರತ ತಂಡದ ಇಬ್ಬರು ಆಟಗಾರರು ಗಾಯಗೊಂಡಿದ್ದಾರೆ. ತಂಡದ ಯುವ ಆಟಗಾರರಾದ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಗಾಯಗೊಂಡಿದ್ದು, ಇಬ್ಬರೂ ಆಟಗಾರರನ್ನು ಇಂಗ್ಲೆಂಡ್ ಪ್ರವಾಸದಿಂದ ಹೊರಗಿಡಲಾಗಿದೆ. ಅಲ್ಲದೆ ಇದೀಗ ಅವರ ಬದಲಿ ಆಟಗಾರರನ್ನು ಸಹ ಬಿಸಿಸಿಐ ಘೋಷಿಸಿದೆ. ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ಭಾರತ ಅಂಡರ್-19 ಇಂಗ್ಲೆಂಡ್ ಪ್ರವಾಸಕ್ಕಾಗಿ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಬದಲಿಗೆ ಡಿ. ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ.
ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ಹೈ ಪರ್ಫಾರ್ಮೆನ್ಸ್ ಶಿಬಿರದ ಆದಿತ್ಯ ಬೆನ್ನಿನ ಗಾಯಕ್ಕೆ ತುತ್ತಾಗಿದ್ದರೆ, ಖಿಲನ್ ಅವರ ಬಲಗಾಲಿನಲ್ಲಿ ಸಮಸ್ಯೆ ಇದೆ. ಹೀಗಾಗಿ ಬಿಸಿಸಿಐ ಇಬ್ಬರೂ ಆಟಗಾರರನ್ನು ಪ್ರವಾಸದಿಂದ ಹೊರಗಿಟ್ಟು, ಇವರಿಬ್ಬರ ಬದಲಿಯಾಗಿ ಸ್ಟಾಂಡ್ ಬೈ ಆಟಗಾರರಾಗಿ ಆಯ್ಕೆಯಾಗಿದ್ದ ಡಿ. ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಬಿಸಿಸಿಐ ಮೇ 22 ರಂದು ಭಾರತೀಯ ಅಂಡರ್-19 ತಂಡವನ್ನು ಘೋಷಿಸಿತ್ತು. ತಂಡದ ನಾಯಕತ್ವವನ್ನು ಆಯುಷ್ ಮ್ಹಾತ್ರೆ ಅವರಿಗೆ ವಹಿಸಲಾಗಿದ್ದು, ಐಪಿಎಲ್ 2025 ರಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಇಂಗ್ಲೆಂಡ್ ಲಯನ್ಸ್ ಕೂಡ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಇಂಗ್ಲೆಂಡ್‌ನ ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅವರ ಮಗ ರಾಕಿ ಫ್ಲಿಂಟಾಫ್ ಕೂಡ ಸೇರಿದ್ದಾರೆ.
IND vs ENG: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಅಂಡರ್-19 ತಂಡ ಪ್ರಕಟ; ಆಯುಷ್ಗೆ ನಾಯಕತ್ವ
ಭಾರತ U19 ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್‌ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು (ಉಪನಾಯಕ ಮತ್ತು ವಿಕೆಟ್‌ಕೀಪರ್), ಹರ್ವಂಶ್ ಸಿಂಗ್ (ವಿಕೆಟ್‌ಕೀಪರ್), ಆರ್.ಎಸ್. ಅಂಬ್ರಿಶ್, ಕನಿಷ್ಕ್ ಚೌಹಾಣ್, ಹೆನಿಲ್ ಪಟೇಲ್, ಯುಧಾಜಿತ್ ಗುಹಾ, ಪ್ರಣವ್ ರಾಘವೇಂದ್ರ, ಮೊಹಮ್ಮದ್ ಏನನ್, ಅನ್ಮೋಲ್ಜೀತ್ ಸಿಂಗ್, ಡಿ.ದೀಪೇಶ್, ನಮನ್ ಪುಷ್ಪಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ