IND vs AFG: ಜೈಸ್ವಾಲ್ ಅಜೇಯ ಶತಕ; ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

Team India Crushes Afghanistan 3-0 in ODI Series: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಜಯದೊಂದಿಗೆ ಭಾರತ 3-0 ಅಂತರದಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಟೆಸ್ಟ್ ಪಂದ್ಯದಲ್ಲಿಯೂ ಇನ್ನಿಂಗ್ಸ್ ಜಯ ಸಾಧಿಸಿದ್ದ ಭಾರತ, ಅಫ್ಘಾನಿಸ್ತಾನಕ್ಕೆ ಈ ಪ್ರವಾಸದಲ್ಲಿ ಗೆಲುವಿನ ಸಿಹಿ ನೋಡಲು ಅವಕಾಶ ನೀಡಲಿಲ್ಲ.

IND vs AFG: ಜೈಸ್ವಾಲ್ ಅಜೇಯ ಶತಕ; ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
Ind Vs Afg
Image Credit source: PTI

Updated on: Jun 20, 2026 | 8:06 PM

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಆತಿಥೇಯ ಭಾರತ 9 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಏಕದಿನ ಸರಣಿಗೂ ಮುನ್ನ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಜಯ ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಏಕದಿನ ಸರಣಿಯನ್ನು ಸಹ ಕ್ಲೀನ್ ಸ್ವೀಪ್ ಮಾಡಿದೆ. ಅಂದರೆ ಭಾರತದ ಪ್ರವಾಸದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ 218 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 1 ವಿಕೆಟ್ ಕಳೆದುಕೊಂಡು 28.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

ಅಫ್ಘನ್ ಬ್ಯಾಟಿಂಗ್ ವೈಫಲ್ಯ

ಈ ಪಂದ್ಯದಲ್ಲಿ ಟಾಸ್ ಗೆದ್ದರೂ, ಮೊದಲು ಬ್ಯಾಟಿಂಗ್ ಮಾಡುವ ಅಫ್ಘಾನಿಸ್ತಾನದ ನಿರ್ಧಾರ ತಪ್ಪೆಂದು ಸಾಬೀತಾಯಿತು. ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಆರಂಭದಿಂದಲೇ ಪ್ರಾಬಲ್ಯ ಮೆರೆದು, ಪವರ್‌ಪ್ಲೇನಲ್ಲಿ ನಾಲ್ವರು ಅಫ್ಘಾನ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಆದಾಗ್ಯೂ, ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ 131 ಎಸೆತಗಳಲ್ಲಿ 102 ರನ್‌ಗಳ ಅದ್ಭುತ ಇನ್ನಿಂಗ್ಸ್ ಮತ್ತು ಅಜ್ಮತುಲ್ಲಾ ಒಮರ್‌ಜೈ 50 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡ 200 ರನ್​ಗಳ ಗಡಿ ದಾಟಲು ನೆರವಾದರು. ಇಬ್ಬರೂ ಐದನೇ ವಿಕೆಟ್‌ಗೆ ಶತಕದ ಪಾಲುದಾರಿಕೆಯನ್ನು ರೂಪಿಸಿದರು. ಈ ಇಬ್ಬರನ್ನು ಹೊರತುಪಡಿಸಿ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.

5 ವಿಕೆಟ್ ಪಡೆದ ಪ್ರಸಿದ್ಧ್

ಈ ಪಂದ್ಯದಲ್ಲಿ ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ 8.2 ಓವರ್‌ಗಳಲ್ಲಿ ಕೇವಲ 23 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದು ಏಕದಿನ ಪಂದ್ಯಗಳಲ್ಲಿ ಅವರ ಮೊದಲ ಐದು ವಿಕೆಟ್ ಗೊಂಚಲು. ಉಳಿದಂತೆ ಗುರ್ನೂರ್ ಬ್ರಾರ್, ಹರ್ಷ್ ದುಬೆ ಮತ್ತು ಪ್ರಿನ್ಸ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಈ ಮಧ್ಯೆ, ನಾಯಕ ಶುಭ್​ಮನ್ ಗಿಲ್ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ರನೌಟ್ ಮಾಡಿದರು.

IND vs AFG: ಚೊಚ್ಚಲ ಸರಣಿಯಲ್ಲೇ ಇತಿಹಾಸ ನಿರ್ಮಿಸಿದ ಗುರ್ನೂರ್ ಬ್ರಾರ್

ಜೈಸ್ವಾಲ್ ಅಜೇಯ ಶತಕ

219 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 170 ರನ್‌ಗಳನ್ನು ಸೇರಿಸುವ ಮೂಲಕ ಪಂದ್ಯವನ್ನು ಏಕಪಕ್ಷೀಯವಾಗಿ ಪರಿವರ್ತಿಸಿದರು. ರೋಹಿತ್ 69 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 79 ರನ್ ಗಳಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 86 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 110 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ಎರಡನೇ ಶತಕವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Sat, 20 June 26

Follow Us