IND vs IRE: 34 ರನ್ಗಳಿಂದ ಹೀನಾಯವಾಗಿ ಸೋಲಿಸಿ ಟೀಂ ಇಂಡಿಯಾದ ಅಹಂ ಮುರಿದ ಐರ್ಲೆಂಡ್
India vs Ireland: ಇಂದು ನಡೆದ ಭಾರತ ಮತ್ತು ಐರ್ಲೆಂಡ್ ಕ್ರಿಕೆಟ್ ಪಂದ್ಯವು ಕ್ರಿಕೆಟ್‌ನಲ್ಲಿ ದುರ್ಬಲ ತಂಡಗಳನ್ನು ಕಡೆಗಣಿಸಬಾರದು ಎಂಬುದಕ್ಕೆ ಸಾಕ್ಷಿ. ಕ್ರಿಕೆಟ್ ಶಿಶು ಐರ್ಲೆಂಡ್, ವಿಶ್ವ ಕ್ರಿಕೆಟ್‌ನ ಸಾಮ್ರಾಟ ಭಾರತವನ್ನು ಐತಿಹಾಸಿಕವಾಗಿ ಸೋಲಿಸಿತು.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 148 ರನ್ಗಳಿಗೆ ಆಲೌಟ್ ಆಗುವ ಮೂಲಕ 34 ರನ್ಗಳ ಹೀನಾಯ ಸೋಲು ಅನುಭವಿಸಿತು.

ಕ್ರಿಕೆಟ್‌ನಲ್ಲಿ ಯಾವುದೇ ದುರ್ಬಲ ತಂಡವನ್ನು ಯಾವುದೇ ಹಂತದಲ್ಲಿ ಕಡೆಗಣಿಸಬಾರದು ಎಂಬುದಕ್ಕೆ ಇಂದು ನಡೆದ ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯವೇ ಸಾಕ್ಷಿ. ವಿಶ್ವ ಕ್ರಿಕೆಟ್‌ನ ಸಾಮ್ರಾಟರಾಗಿ ಮೆರೆಯುತ್ತಿರುವ ಟೀಂ ಇಂಡಿಯಾಕ್ಕೆ, ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಐರ್ಲೆಂಡ್ ಸರಿಯಾದ ಪಾಠ ಕಲಿಸಿದೆ. ಐಪಿಎಲ್‌ನ ಜನಪ್ರಿಯತೆಯಲ್ಲಿ ಕಳೆದುಹೋಗಿದ್ದ ಟೀಂ ಇಂಡಿಯಾ ಆಟಗಾರರು, ಇಂದು ಐರ್ಲೆಂಡ್ ಆಟಗಾರರ ಕೆಚ್ಚೆದೆಯ ಆಟದ ಎದುರು ಅಕ್ಷರಶಃ ಶರಣಾಗಿ ಹೋದರು. ಜನಪ್ರಿಯತೆಯ ಅಮಲಿನಲ್ಲಿ ಕ್ಯಾಚ್ ಹಿಡಿಯುವುದನ್ನೇ ಮರೆತಿರುವಂತೆ ವರ್ತಿಸಿದ ಟೀಂ ಇಂಡಿಯಾ ಆಟಗಾರರಿಗೆ ಅಸಾಧ್ಯವಾದಂತಹ ಕ್ಯಾಚ್ಗಳನ್ನು ಹಿಡಿಯುವುದು ಹೇಗೆ ಎಂಬುದನ್ನು ಐರ್ಲೆಂಡ್ ಆಟಗಾರರು ಕಲಿಸಿಕೊಟ್ಟರು. ಈ ಪಂದ್ಯದಲ್ಲಿ ಭಾರತ ಕೈಚೆಲ್ಲಿದ್ದು ಬರೋಬ್ಬರಿ 3 ಕ್ಯಾಚ್ಗಳು ಇದಕ್ಕೆ ಪ್ರತಿಫಲವಾಗಿ ಸಿಕ್ಕಿದ್ದು ಹೀನಾಯ ಸೋಲು. ಇತ್ತ ಸ್ಮರಣೀಯ ಪ್ರದರ್ಶನ ನೀಡಿದ ಐರ್ಲೆಂಡ್ಗೆ ಸಿಕ್ಕಿದ್ದು, ಭಾರತದ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಜಯ.
ಐರ್ಲೆಂಡ್‌ನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ನಲ್ಲಿ ಎಲ್ಲರೂ ಮೆಚ್ಚುವಂತಹ ಪ್ರದರ್ಶನ ನೀಡಿದ ಐರ್ಲೆಂಡ್ ಬ್ಯಾಟರ್ಗಳು ನಿಗದಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ಭಾರತದ ಬೌಲರ್ಗಳ ಮುಂದೆ ಮಂಡಿಯೂರಲಿಲ್ಲ. ತಂಡದ ಅಗ್ರ ಮೂವರು ಬ್ಯಾಟ್ಸ್ಮನ್ಗಳು ದೊಡ್ಡ ಮೊತ್ತ ಕಲೆಹಾಕದಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ಮನ್ಗಳು ಭಾರತದ ಬೌಲರ್ಗಳ ಬೆವರಿಳಿಸಿದರು.
ಐರ್ಲೆಂಡ್ ತಂಡದ ನಾಯಕನಾಗಿ ಮೊಟ್ಟ ಮೊದಲ ಪಂದ್ಯದಲ್ಲೇ ಮಿಂಚಿದ ಲೋರ್ಕನ್ ಟಕರ್ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದು ಅವರ 12 ನೇ ಟಿ20 ಅಂತರರಾಷ್ಟ್ರೀಯ ಅರ್ಧಶತಕವೂ ಆಗಿತ್ತು. ಆರನೇ ಕ್ರಮಾಂಕದಲ್ಲಿ ಬಂದ ಗ್ಯಾರೆತ್ ಡೆಲಾನಿ ಕೂಡ 49 ರನ್ಗಳ ಕಾಣಿಕೆ ನೀಡಿದರು. ಇವರಿಬ್ಬರ ಜೊತೆಗೆ ಉಳಿದ ಐರ್ಲೆಂಡ್ ಬ್ಯಾಟ್ಸ್ಮನ್ಗಳು ಅಲ್ಪ ಕಾಣಿಕೆ ನೀಡುವ ಮೂಲಕ ತಂಡವನ್ನು 183 ರನ್ಗಳಿಗೆ ಕೊಂಡೊಯ್ದರು. ಐರ್ಲೆಂಡ್‌ನ ಈ ಸಾಧನೆಯಲ್ಲಿ ಭಾರತದ ಫಿಲ್ಡರ್ಗಳ ಕೈವಾಡವೂ ಇತ್ತು.
ಐರ್ಲೆಂಡ್ ವಿರುದ್ಧ ಕ್ರಿಕೆಟ್ ಶಿಶುಗಳಂತೆ ಫಿಲ್ಡಿಂಗ್ ಮಾಡಿದ ಭಾರತದ ಫಿಲ್ಡರ್ಗಳು 3 ಕ್ಯಾಚ್ಗಳನ್ನು ಕೈಚೆಲ್ಲಿದರು. ಹಾಗೆಯೇ ಐಪಿಎಲ್‌ನಲ್ಲಿ ರನ್ ಕಡಿವಾಣ ಹಾಕುವುದರಲ್ಲಿ ನಿಸ್ಸೀಮರೆನಿಸಿಕೊಂಡಿದ್ದ ಭಾರತದ ಬೌಲರ್ಗಳು ಐರಿಶ್ ಆಟಗಾರರ ಮುಂದೆ ಸರಾಗವಾಗಿ ರನ್ ಬಿಟ್ಟುಕೊಟ್ಟರು. ವಿಶೇಷವಾಗಿ ಪ್ರಸಿದ್ಧ್ ಕೃಷ್ಣ 4 ಓವರ್ಗಳಲ್ಲಿ ನೀಡಿದ್ದು 57 ರನ್. ಉಳಿದವರು ಕೂಡ ತಕ್ಕಮಟ್ಟಿಗೆ ರನ್ಗಳಿಗೆ ಕಡಿವಾಣ ಹಾಕಿದರಾದರೂ ಕಳಪೆ ಫಿಲ್ಡಿಂಗ್ನಿಂದಾಗಿ ವಿಕೆಟ್ ಪಡೆಯುವ ಅವಕಾಶವನ್ನು ಕಳೆದುಕೊಂಡರು.
ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳು ನೀಡಿದ್ದ ಬೆಟ್ಟದಂತಹ ಗುರಿಯನ್ನು ನೀರು ಕುಡಿದಷ್ಟೇ ಸಲಿಸಾಗಿ ಬೆನ್ನಟ್ಟಿ ಗೆದ್ದಿದ್ದ ಟೀಂ ಇಂಡಿಯಾಕ್ಕೆ ಇದು ದೊಡ್ಡ ಟಾರ್ಗೆಟ್ ಆಗಿರಲಿಲ್ಲ. ಆದರೆ ಐರ್ಲೆಂಡ್ ಬೌಲರ್ಗಳ ಕರಾರುವಕ್ಕಾದ ದಾಳಿ ಇತ್ತಲ್ಲ ಅದು ಎಲ್ಲರನ್ನು ಮೆಚ್ಚಿಸುವಂತಿತ್ತು. ಅದರಲ್ಲೂ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಭಾರತೀಯ ಮೂಲದ ಜೈ ಮುಂಧ್ರಾ ಹಾಗೂ ಮ್ಯಾಥ್ಯೂ ಹಂಫ್ರೀಸ್ ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಅಕ್ಷರಶಃ ಕಾಡಿದರು. ಜೈ ಮುಂಧ್ರಾ ಎರಡನೇ ಓವರ್ನ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಉರುಳಿಸುವ ಮೂಲಕ ಮೊದಲ ಆಘಾತ ನೀಡಿದರು.
ಆ ಬಳಿಕ ಬಂದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ಗೆ ಮ್ಯಾಥ್ಯೂ ಹಂಫ್ರೀಸ್ ಪೆವಿಲಿಯನ್ ದಾರಿ ತೋರಿಸಿದರು. ಎಂದಿನಂತೆ ನಿಧಾನಗತಿಯ ಬ್ಯಾಟಿಂಗ್ ಮೂಲಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ ತಿಲಕ್ ವರ್ಮಾ 19 ರನ್ಗಳಿಗೆ ಸುಸ್ತಾದರೆ, ಸುಂದರ್ ಆಟ 9 ರನ್ಗಳನ್ನು ಮೀರಿ ಹೋಗಲಿಲ್ಲ. ಶಿವಂ ದುಬೆ 25 ರನ್ ಬಾರಿಸಿದರಾದರೂ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ದುಬೆ ವಿಕೆಟ್ ಕಬಳಿಸಿದ ಜೈ ಮುಂಧ್ರಾ ಭಾರತದ ಸೋಲನ್ನು ಖಚಿತಪಡಿಸಿದರು. ಆ ಬಳಿಕ ಬಂದ ಬಾಲಂಗೋಚಿಗಳು ನಿರೀಕ್ಷಿತ ಪ್ರದರ್ಶನ ನೀಡಿ ತಂಡವನ್ನು ಐತಿಹಾಸಿಕ ಸೋಲಿಗೆ ದೂಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 pm, Fri, 26 June 26




