IND vs NZ: ಮಳೆಯಿಂದ ಪಂದ್ಯ ರದ್ದು; ಕಿವೀಸ್ ನಾಡಲ್ಲಿ ಏಕದಿನ ಸರಣಿ ಗೆಲ್ಲುವ ಭಾರತದ ಕನಸು ಭಗ್ನ..!
IND vs NZ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್‌ನಲ್ಲಿ ಸುರಿದ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ.
ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಹ್ಯಾಮಿಲ್ಟನ್‌ನಲ್ಲಿ (Hamilton) ಸುರಿದ ಮಳೆಯಿಂದಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಶಿಖರ್ ಧವನ್ ಮತ್ತು ಶುಭಮನ್ ಗಿಲ್ (Shikhar Dhawan and Shubman Gill) ಜೋಡಿ 4.5 ಓವರ್‌ಗಳಲ್ಲಿ 22 ರನ್ ಗಳಿಸಿತು. ಈ ವೇಳೆ ಮಳೆ ತನ್ನ ಆಟವನ್ನು ತೋರಿಸಿದ್ದರಿಂದ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಮರಳಬೇಕಾಯಿತು. ಇದಾದ ಬಳಿಕ ಮತ್ತೆ ಪಂದ್ಯ ಆರಂಭಗೊಂಡು ಭಾರತ 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿತ್ತು. ಆದರೆ ಮತ್ತೆ ಮಳೆಯಿಂದಾಗಿ ಪಂದ್ಯವನ್ನು ಎರಡನೇ ಬಾರಿಗೆ ನಿಲ್ಲಿಸಲಾಯಿತು. ಹ್ಯಾಮಿಲ್ಟನ್‌ನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದ್ದು, ಸುದೀರ್ಘ ಕಾಯುವಿಕೆಯ ನಂತರ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ತಲಾ 29 ಓವರ್ಗಳ ಪಂದ್ಯ
ಆಕ್ಲೆಂಡ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಹೀಗಾಗಿ ಹ್ಯಾಮಿಲ್ಟನ್‌ನಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸಲು ಭಾರತಕ್ಕೆ ಅವಕಾಶವಿತ್ತು. ಆದರೆ ಮಳೆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿತು. ಮಧ್ಯದಲ್ಲಿ ಸ್ವಲ್ಪ ಹೊತ್ತು ಮಳೆ ನಿಂತಿದ್ದರಿಂದ ಪಂದ್ಯವನ್ನು ತಲಾ 29 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಈ ವೇಳೆ ಮತ್ತೆ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಧವನ್ ವಿಕೆಟ್ ರೂಪದಲ್ಲಿ ಆಘಾತ ಎದುರಾಯಿತು. ಆದರೆ ಆ ಬಳಿಕ ಜೊತೆಯಾದ ಗಿಲ್ ಮತ್ತು ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದರು.
ಸೂರ್ಯ- ಗಿಲ್ ಸ್ಫೋಟಕ ಬ್ಯಾಟಿಂಗ್
ಅದರಲ್ಲೂ ಕಿವೀಸ್ ಬೌಲರ್ಗಳ ಮೇಲೆ ಅಬ್ಬರಿಸಿದ ಸೂರ್ಯ ಆರಂಭಿಕ ಓವರ್‌ಗಳಲ್ಲಿ ನಿದಾನಗತಿಯ ಬ್ಯಾಟಿಂಗ್ ಮಾಡಿದರೂ ಸಹ ನಂತರ ತಮ್ಮ ಎಂದಿನ ಬ್ಯಾಟಿಂಗ್ ಶೈಲಿಯನ್ನು ಆರಂಭಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 25 ಎಸೆತಗಳನ್ನು ಎದುರಿಸಿದ ಸೂರ್ಯ ಮೂರು ಭರ್ಜರಿ ಸಿಕ್ಸರ್ ಹಾಗೂ ಎರಡು ಬೌಂಡರಿಗಳ ಸಹಾಯದಿಂದ ಅಜೇಯ 34 ರನ್ ಗಳಿಸಿದರೆ, ಆರಂಭಿಕರಾಗಿ ಕಣಕ್ಕಿಳಿದಿದ್ದ ಗಿಲ್, 42 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 45 ರನ್ ಕಲೆಹಾಕಿದರು.
ಸರಣಿ ಸಮಬಲಗೊಳಿಸುವ ಅವಕಾಶ
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಸೋತಿರುವ ಧವನ್ ಪಡೆ ಈ ಪಂದ್ಯವನ್ನು ಗೆದ್ದು ಸರಣಿ ಜೀವಂತವಾಗಿರಿಸಲು ಪ್ರಯತ್ನಿಸಿತ್ತು. ಆದರೆ ಈಗ ಪಂದ್ಯ ರದ್ದಾಗಿರುವುದರಿಂದ ಕಿವೀಸ್ ನಾಡಲ್ಲಿ ಏಕದಿನ ಸರಣಿ ಗೆಲ್ಲುವ ಅವಕಾಶವನ್ನು ಶಿಖರ್ ಧವನ್ ಪಡೆ ಕಳೆದುಕೊಂಡಿದೆ. ಆದರೆ ಸರಣಿ ಸೋಲನ್ನು ತಪ್ಪಿಸಲು ಇನ್ನೂ ಅವಕಾಶವಿದ್ದು, ಇದಕ್ಕಾಗಿ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ಕೊನೆಯ ಪಂದ್ಯಕ್ಕೂ ಮಳೆಕಾಟ ನೀಡಿ ಪಂದ್ಯ ರದ್ದಾದರೆ ಏಕದಿನ ಸರಣಿ ಕಿವೀಸ್ ಪಾಲಾಗಲಿದೆ.
Published On - 12:47 pm, Sun, 27 November 22