India vs New Zealand 2nd T20: ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದ ಭಾರತ
India vs New Zealand 2nd T20: ಮೊದಲ 10 ಓವರ್ಗಳಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್ಗಳು ದ್ವಿತಿಯಾರ್ಧದಲ್ಲೂ ಪರಾಕ್ರಮ ಮರೆದರು.
India vs New Zealand 2nd T20: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇದಕ್ಕೂ ಮುನ್ನ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಟೀಮ್ ಇಂಡಿಯಾ ಬೌಲರ್ಗಳು ಪವರ್ಪ್ಲೇನಲ್ಲೇ ನಿರೂಪಿಸಿದ್ದರು. 4ನೇ ಓವರ್ನಲ್ಲಿ ಫಿನ್ ಅಲೆನ್ (11) ರನ್ನು ಕ್ಲೀನ್ ಬೌಲ್ಡ್ ಮಾಡಿ ಚಹಾಲ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಡೆವೊನ್ ಕಾನ್ವೆ (11) ಸುಂದರ್ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ಗ್ಲೆನ್ ಫಿಲಿಪ್ಸ್ (5) ದೀಪಕ್ ಹೂಡಾ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಇನ್ನು ಡೇರಿಲ್ ಮಿಚೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಟೀಮ್ ಇಂಡಿಯಾಗೆ 5ನೇ ಯಶಸ್ಸು ತಂದುಕೊಟ್ಟರು. ಈ ವೇಳೆ 10 ಓವರ್ಗಳಲ್ಲಿ ನ್ಯೂಜಿಲೆಂಡ್ ಕಲೆಹಾಕಿದ್ದು ಕೇವಲ 60 ರನ್ ಮಾತ್ರ.
ಮೊದಲ 10 ಓವರ್ಗಳಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಬೌಲರ್ಗಳು ದ್ವಿತಿಯಾರ್ಧದಲ್ಲೂ ಪರಾಕ್ರಮ ಮರೆದರು. ಪರಿಣಾಮ ನ್ಯೂಜಿಲೆಂಡ್ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಇದಾಗ್ಯೂ ಮೈಕೆಲ್ ಬ್ರೇಸ್ವೆಲ್ 14 ರನ್ಗಳಿಸಿದರೆ, ನಾಯಕ ಮಿಚೆಲ್ ಸ್ಯಾಂಟ್ನರ್ ಅಜೇಯ 19 ರನ್ ಕಲೆಹಾಕಿದರು. ಅದರಂತೆ ನಿಗದಿತ 20 ಓವರ್ಗಳಲ್ಲಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 99 ರನ್ಗಳಿಸಲಷ್ಟೇ ಶಕ್ತರಾದರು.
ಟೀಮ್ ಇಂಡಿಯಾ ಪರ 2 ಓವರ್ಗಳಲ್ಲಿ ಕೇವಲ 7 ರನ್ ನೀಡಿ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ, ಚಹಾಲ್, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ಹಾಗೂ ದೀಪಕ್ ಹೂಡಾ ತಲಾ 1 ವಿಕೆಟ್ ಕಬಳಿಸಿದರು.
ಇನ್ನು 100 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭವೇನು ಪಡೆದಿರಲಿಲ್ಲ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಶುಭ್ಮನ್ ಗಿಲ್ ಈ ಬಾರಿ ಕೂಡ ಕೇವಲ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಇಶಾನ್ ಕಿಶನ್ ಹಾಗೂ ರಾಹುಲ್ ತ್ರಿಪಾಠಿ 28 ರನ್ಗಳ ಜೊತೆಯಾಟವಾಡಿದರು. ಇದೇ ವೇಳೆ ರನ್ ಕದಿಯುವ ಯತ್ನ ಮಾಡಿದ ಇಶಾನ್ ಕಿಶನ್ (19) ರನೌಟ್ ಆಗಿ ನಿರ್ಗಮಿಸಿದರು. ಪರಿಣಾಮ ಟೀಮ್ ಇಂಡಿಯಾ ಮೊದಲ 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 49 ರನ್ಗಳು ಮಾತ್ರ.
11ನೇ ಓವರ್ನಲ್ಲಿ ರಾಹುಲ್ ತ್ರಿಪಾಠಿ (13) ಕ್ಯಾಚ್ ನೀಡಿ ಹೊರನಡೆದರು. ಇನ್ನು ಸೂರ್ಯಕುಮಾರ್ ಯಾದವ್ ಮಾಡಿದ ತಪ್ಪಿನಿಂದಾಗಿ ವಾಷಿಂಗ್ಟನ್ ಸುಂದರ್ (10) ರನೌಟ್ ಆಗುವ ಮೂಲಕ ವಿಕೆಟ್ ತ್ಯಾಗ ಮಾಡಿದರು. ಪರಿಣಾಮ ಕೊನೆಯ 3 ಓವರ್ಗಳಲ್ಲಿ ಟೀಮ್ ಇಂಡಿಯಾ 18 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಆಟವಾಡಿದರು. ಅದರಂತೆ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 6 ರನ್ಗಳು ಬೇಕಿತ್ತು.
ಕೊನೆಯ ಓವರ್ನ ಮೊದಲೆರಡು ಎಸೆತಗಳಲ್ಲಿ ಟಿಕ್ನರ್ ಕೇವಲ 1 ರನ್ ಮಾತ್ರ ನೀಡಿದರು. 3ನೇ ಎಸೆತದಲ್ಲಿ 1 ರನ್. ನಾಲ್ಕನೇ ಎಸೆತದಲ್ಲಿ 1 ರನ್. 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಫೋರ್ ಬಾರಿಸಿ ಭಾರತ ತಂಡಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.