ICC U19 World Cup 2023: ಟೀಮ್ ಇಂಡಿಯಾ ವಿಶ್ವ ಚಾಂಪಿಯನ್
India Women U19 vs England Women U19: ಕೇವಲ 16 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡಕ್ಕೆ ರಯಾನಾ ಮ್ಯಾಕ್ಡೊನಾಲ್ಡ್ ಆಸರೆಯಾದರು.
India Women U19 vs England Women U19, Final: ಸೌತ್ ಆಫ್ರಿಕಾದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ಯುವತಿಯರು ಯಶಸ್ವಿಯಾದರು.
ಮೊದಲ ಓವರ್ನ ನಾಲ್ಕನೇ ಎಸೆತದಲ್ಲೇ ಲಿಬರ್ಟಿ ಹೀಪ್ (0) ವಿಕೆಟ್ ಪಡೆದು ಟಿಟಾಸ್ ಸಾಧು ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಫಿಯೋನಾ ಹಾಲೆಂಡ್ (10) ರನ್ನು ಅರ್ಚನಾ ದೇವಿ ಕ್ಲೀನ್ ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೆ ಅದೇ ಓವರ್ನ ಅಂತಿಮ ಎಸೆತದಲ್ಲಿ ಇಂಗ್ಲೆಂಡ್ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ (4) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಅರ್ಚನಾ ಯಶಸ್ವಿಯಾದರು.
ಇತ್ತ ಕೇವಲ 16 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡಕ್ಕೆ ರಯಾನಾ ಮ್ಯಾಕ್ಡೊನಾಲ್ಡ್ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ 19 ರನ್ ಬಾರಿಸುವ ಮೂಲಕ ರಯಾನಾ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.
ಆದರೆ ಮತ್ತೊಂದೆಡೆ ಇಂಗ್ಲೆಂಡ್ ಆಟಗಾರ್ತಿಯರ ಪೆವಿಲಿಯನ್ ಪರೇಡ್ ಮುಂದುವರೆದಿತ್ತು. ಪರಿಣಾಮ 17.1 ಓವರ್ಗಳಲ್ಲಿ ಇಂಗ್ಲೆಂಡ್ ತಂಡ 68 ರನ್ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಹಾಗೂ ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಕೇವಲ 69 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದರು. ಮೊದಲ 2 ಓವರ್ಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್ ಬಾರಿಸಿ ಶಫಾಲಿ 16 ರನ್ ಕಲೆಹಾಕಿದ್ದರು. ಆದರೆ ಬಿರುಸಿನ ಆಟಕ್ಕೆ ಮುಂದಾದ ಶಫಾಲಿ 3ನೇ ಓವರ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಶ್ವೇತಾ ಸೆಹ್ರಾವತ್ (5) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಸೌಮ್ಯ ತಿವಾರಿ ಹಾಗೂ ತ್ರಿಶಾ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ಟೀಮ್ ಇಂಡಿಯಾ 48 ರನ್ ಕಲೆಹಾಕಿತು. ಇನ್ನು ಗೆಲುವಿನ ಹೊಸ್ತಿಲಲ್ಲಿದ್ದಾಗ 24 ರನ್ಗಳಿಸಿದ್ದ ತ್ರಿಶಾ ಔಟಾದರು.
ಅಂತಿಮವಾಗಿ 14 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ಗಳಿಸುವ ಮೂಲಕ ಟೀಮ್ ಇಂಡಿಯಾ 7 ವಿಕೆಟ್ಗಳ ಜಯಭೇರಿ ಬಾರಿಸಿತು. ಈ ಮೂಲಕ ಚೊಚ್ಚಲ ಮಹಿಳಾ ಅಂಡರ್ 19 ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟೀಮ್ ಇಂಡಿಯಾ WU19 ಪ್ಲೇಯಿಂಗ್ 11: ಶಫಾಲಿ ವರ್ಮಾ (ನಾಯಕಿ) , ಶ್ವೇತಾ ಸೆಹ್ರಾವತ್ , ಸೌಮ್ಯ ತಿವಾರಿ , ಗೊಂಗಡಿ ತ್ರಿಶಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಹೃಷಿತಾ ಬಸು , ಟಿಟಾಸ್ ಸಾಧು , ಮನ್ನತ್ ಕಶ್ಯಪ್ , ಅರ್ಚನಾ ದೇವಿ , ಪಾರ್ಶವಿ ಚೋಪ್ರಾ , ಸೋನಮ್ ಯಾದವ್.
ಇಂಗ್ಲೆಂಡ್ WU19 ಪ್ಲೇಯಿಂಗ್ 11: ಗ್ರೇಸ್ ಸ್ಕ್ರಿವೆನ್ಸ್ (ನಾಯಕಿ) , ಲಿಬರ್ಟಿ ಹೀಪ್ , ನಿಯಾಮ್ ಫಿಯೋನಾ ಹಾಲೆಂಡ್ , ಸೆರೆನ್ ಸ್ಮೇಲ್ (ವಿಕೆಟ್ ಕೀಪರ್) , ರಿಯಾನಾ ಮ್ಯಾಕ್ಡೊನಾಲ್ಡ್ ಗೇ , ಚಾರಿಸ್ ಪಾವೆಲಿ , ಅಲೆಕ್ಸಾ ಸ್ಟೋನ್‌ಹೌಸ್ , ಸೋಫಿಯಾ ಸ್ಮೇಲ್ , ಜೋಸಿ ಗ್ರೋವ್ಸ್ , ಎಲ್ಲೀ ಆಂಡರ್ಸನ್ , ಹನ್ನಾ ಬೇಕರ್.
Published On - 7:16 pm, Sun, 29 January 23