India vs New Zealand: ಗೆಲುವಿನ ನಿಶ್ಚಿತ ಹಾದಿಯಲ್ಲಿ ಟೀಮ್ ಇಂಡಿಯಾ: ಇಂದೇ ಮುಗಿಯುತ್ತಾ ಎರಡನೇ ಟೆಸ್ಟ್?

IND vs NZ, 2nd Test: ಭಾರತ ಈ ಪಂದ್ಯ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಯಾಕಂದ್ರೆ ಕೊಹ್ಲಿ ಪಡೆಯ ಮುಂದಿನ ಹಾದಿ ಬಹುತೇಕ ಸುಲಭ ಇದ್ದಂತೆ ತೋರುತ್ತಿದೆ. ಇನ್ನೂ 3 ದಿನಗಳ ಆಟವಿದೆಯಾದರೂ ಇಂದೇ ಪಂದ್ಯ ಮುಗಿದರೆ ಅಚ್ಚರಿ ಪಡಬೇಕಿಲ್ಲ.

India vs New Zealand: ಗೆಲುವಿನ ನಿಶ್ಚಿತ ಹಾದಿಯಲ್ಲಿ ಟೀಮ್ ಇಂಡಿಯಾ: ಇಂದೇ ಮುಗಿಯುತ್ತಾ ಎರಡನೇ ಟೆಸ್ಟ್?
India vs New Zealand 2nd Test Day 3

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ (India vs New Zealand) ಗೆಲುವಿನ ನಿಶ್ಚಿತ ಹಾದಿಯತ್ತ ಸಾಗುತ್ತಿದೆ. ಕಿವೀಸ್ ಪಡೆಯನ್ನು ಕೇವಲ 62 ರನ್​ಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ (Team India) ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ ಬಾರಿಸಿದೆ. ಈ ಮೂಲಕ ಕೊಹ್ಲಿ (Virat Kohli) ಪಡೆ ಬರೋಬ್ಬರಿ 332 ರನ್​ಗಳ ಮುನ್ನಡೆ ಪಡೆದುಕೊಂಡಿದ್ದು ಬೃಹತ್ ಮೊತ್ತ ಪೇರಿಸುವ ಯೋಜನೆಯಲ್ಲಿದೆ. ನಿನ್ನೆ ಎರಡನೇ ದಿನದಾಟದಲ್ಲಿ ಬೌಲರ್​ಗಳೇ ಮೇಲುಗೈ ಸಾಧಿಸಿದರು. ಎಜಾಜ್ ಪಟೇಲ್ (Ajaz Patel) ಭಾರತದ 10 ವಿಕೆಟ್ ಕಿತ್ತ ವಿಶ್ವ ದಾಖಲೆ ಬರೆದರೆ, ಇತ್ತ ಭಾರತೀಯ ಬೌಲರ್​ಗಳ ಬೆಂಕಿಯ ಚೆಂಡಿಗೆ ತತ್ತರಿಸಿದ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆ ಬರೆಯಿತು.

ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿದ್ದರು. ಅದರೆ ನಂತರ ಕಣಕ್ಕಿಳಿದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಯಾರೂ ಕೂಡ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಮಯಾಂಕ್ ಅಗರ್ವಾಲ್ ಮಾತ್ರ ಏಕಾಂಗಿ ಹೋರಾಟ ನಡೆಸಿ 150 ರನ್ ಗಳಿಸಿದರೆ ಅಂತಿಮವಾಗಿ ಅಕ್ಷರ್ ಪಟೇಲ್ ಅರ್ಧಶತಕ ಬಾರಿಸಿದರು. ಹೀಗೆ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಅಜಾಜ್ ಪಟೇಲ್ 10 ವಿಕೆಟ್ ಗೊಂಚಲು ಪಡೆಯುವ ಮೂಲಕ ಹೀರೋ ಆಗಿ ಮಿಂಚಿದರು.

ಟೀಮ್ ಇಂಡಿಯಾ ಆಟಗಾರರನ್ನು 325 ರನ್‌ಗಳಿಗೆ ಕಟ್ಟಿ ಹಾಕಿ ತನ್ನ ಪಾಲಿನ ಮೊದಲನೇ ಇನ್ನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ ಭಾರತೀಯ ಬೌಲರ್‌ಗಳ ದಾಳಿಗೆ ಅಕ್ಷರಷಃ ತತ್ತರಿಸಿತು. 28.1 ಓವರ್‌ಗಳಲ್ಲಿ ಕೇವಲ 62 ರನ್‌ಗಳಿಗೆ ನ್ಯೂಜಿಲೆಂಡ್‌ ಆಲ್‌ಔಟ್ ಆಯಿತು. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್, ಮೊಹಮ್ಮದ್ ಸಿರಾಜ್ 3 ವಿಕೆಟ್, ಅಕ್ಷರ್ ಪಟೇಲ್ 2 ವಿಕೆಟ್ ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದರು.

ಫಾಲೋ ಆನ್ ಹೇರುವ ಅವಕಾಶ ಇದ್ದರೂ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಸತತವಾಗಿ ಬೌಲಿಂಗ್ ಮಾಡಿ ಹೈರಾಣಾಗಿದ್ದ ನ್ಯೂಜಿಲೆಂಡ್ ತಂಡದ ಬೌಲರ್​ಗಳು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಬೌಲಿಂಗ್ ಮಾಡುವ ಪ್ರಮೇಯ ಬಂದೊದಗಿತು. ಭಾರತ 2ನೇ ದಿನಾಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಮಯಂಕ್ ಅಗರ್ವಾಲ್ (38*) ತಮ್ಮ ಮೊದಲ ಇನ್ನಿಂಗ್ಸ್​ನ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಚೇತೇಶ್ವರ್ ಪೂಜಾರ (29*) ಲಯ ಕಂಡುಕೊಂಡಿದ್ದಾರೆ.

ಭಾರತ ಈ ಪಂದ್ಯ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಯಾಕಂದ್ರೆ ಕೊಹ್ಲಿ ಪಡೆಯ ಮುಂದಿನ ಹಾದಿ ಬಹುತೇಕ ಸುಲಭ ಇದ್ದಂತೆ ತೋರುತ್ತಿದೆ. ಇನ್ನೂ 3 ದಿನಗಳ ಆಟವಿದೆಯಾದರೂ ಇಂದೇ ಪಂದ್ಯ ಮುಗಿದರೆ ಅಚ್ಚರಿ ಪಡಬೇಕಿಲ್ಲ.

IND vs SA: ಭಾರತ-ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ ಬದಲಾವಣೆ

(India vs New Zealand 2nd Test Tam India 69-0 in second innings at stumps lead by 332 runs)

Click on your DTH Provider to Add TV9 Kannada