
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಗಿದಿದೆ. ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿದೆ. ಪರಿಣಾಮ ಮೊದಲ ದಿನದಾಟದಲ್ಲಿ ಸೌತ್ ಆಫ್ರಿಕಾ ತಂಡ ಆಲೌಟ್ ಆಗಿಲ್ಲ, ಇತ್ತ ಟೀಮ್ ಇಂಡಿಯಾ ಹೆಚ್ಚು ರನ್ ಬಿಟ್ಟು ಕೊಟ್ಟಿಲ್ಲ ಎನ್ನಬಹುದು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ (35) ಹಾಗೂ ಐಡೆನ್ ಮಾರ್ಕ್ರಾಮ್ (38) ಮೊದಲ ವಿಕೆಟ್ಗೆ 82 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದ್ದರು.
ಇದಾದ ಬಳಿಕ ಬಂದ ಟ್ರಿಸ್ಟನ್ ಸ್ಟಬ್ಸ್ 49 ರನ್ ಬಾರಿಸಿದರೆ, ಟೆಂಬಾ ಬವುಮಾ 41 ರನ್ಗಳ ಕೊಡುಗೆ ನೀಡಿದರು. ಇನ್ನು ಟೋನಿ ಡಿ ಝೋರ್ಝಿ 28 ರನ್ ಬಾರಿಸಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು.
ಈ ಮೂಲಕ ಸೌತ್ ಆಫ್ರಿಕಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 247 ರನ್ಗಳಿಸಿದೆ. ಟೀಮ್ ಇಂಡಿಯಾ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ. ಇನ್ನುಳಿದ 3 ವಿಕೆಟ್ಗಳನ್ನು ಪಡೆದಿರುವುದು ಕುಲ್ದೀಪ್ ಯಾದವ್.
ಮೊದಲ ದಿನದಾಟದಲ್ಲಿ 247 ರನ್ಗಳಿಸಿರುವ ಸೌತ್ ಆಫ್ರಿಕಾ ಪರ ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರ್ರೆನ್ನೆ (1) ಹಾಗು ಸೆನುರಾನ್ ಮುತ್ತುಸಾಮಿ (25) ದ್ವಿತೀಯ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಟ್ರಾವಿಸ್ ಹೆಡ್
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.