ಆಂಗ್ಲರ ಅಭೇದ್ಯ ಕೋಟೆಯನ್ನು ಭೇದಿಸಿದ ಭಾರತಕ್ಕೆ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಯಾವ ಸ್ಥಾನ?
Updated WTC Points Table 2025-27: ಭಾರತ ತಂಡ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 336 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಮೊದಲ ಟೆಸ್ಟ್‌ನಲ್ಲಿ ಸೋತ ಭಾರತ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿದರೆ, ಇತ್ತ ಎರಡನೇ ಟೆಸ್ಟ್ ಸೋತಿರುವ ಇಂಗ್ಲೆಂಡ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ WTC ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (Team India) ಕೊನೆಗೂ ತನ್ನ ಗೆಲುವಿನ ಖಾತೆಯನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ. ಲೀಡ್ಸ್ ಟೆಸ್ಟ್‌ನಲ್ಲಿ ಐದು ಶತಕ ಬಾರಿಸಿಯೂ ಐದು ವಿಕೆಟ್ಗಳಿಂದ ಸೋತಿದ್ದ ಟೀಂ ಇಂಡಿಯಾ, ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯವನ್ನು 336 ರನ್ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಟೀಂ ಇಂಡಿಯಾ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಮೊದಲ ಗೆಲುವು ದಾಖಲಿಸಿತು. ಹಾಗೆಯೇ ಈ ಗೆಲುವಿನೊಂದಿಗೆ, ಟೀಂ ಇಂಡಿಯಾ 2025-27 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ (WTC Points Table 2025-27) ದೊಡ್ಡ ಜಿಗಿತ ಸಾಧಿಸಿದ್ದು, ನಾಲ್ಕನೇ ಸ್ಥಾನಕ್ಕೆ ಬಂದಿದ್ದರೆ, ಇತ್ತ ಭಾರಿ ಅಂತರದಲ್ಲಿ ಸೋತ ಆತಿಥೇಯ ಇಂಗ್ಲೆಂಡ್ ಎರಡನೇ ಸ್ಥಾನದಿಂದ ಕುಸಿದು ಮೂರನೇ ಸ್ಥಾನಕ್ಕೆ ಬಂದಿದೆ.
WTC ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆ
ಎಡ್ಜ್‌ಬಾಸ್ಟನ್ ಟೆಸ್ಟ್ ಗೆದ್ದಿರುವ ಟೀಂ ಇಂಡಿಯಾ ನಾಲ್ಕನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಒಂದರಲ್ಲಿ ಗೆದ್ದಿದೆ. ಹೀಗಾಗಿ 50 ರ ಗೆಲುವಿನ ಶೇಕಡಾವಾರುವಿನೊಂದಿಗೆ 12 ಅಂಕಗಳನ್ನು ಸಂಪಾದಿಸಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು. ಆದಾಗ್ಯೂ, ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಖಾತೆಯನ್ನು ತೆರೆದಿದೆ. ಇಂಗ್ಲೆಂಡ್ ಬಗ್ಗೆ ಹೇಳುವುದಾದರೆ, ಈ ಪಂದ್ಯದ ಮೊದಲು ತಂಡವು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು, ಆದರೆ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಅದರ ಗೆಲವಿನ ಶೇಕಡಾವಾರು 100 ಇದೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಎರಡು ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದು, ಅದರ ಗೆಲುವಿನ ಶೇಕಡಾವಾರು 66.67 ಆಗಿದೆ. ಬಾಂಗ್ಲಾದೇಶ ಕೂಡ ಆಡಿದ 2 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಕೇವಲ ಒಂದು ಪಂದ್ಯವನ್ನು ಆಡಿದ್ದು, ಅದರಲ್ಲಿ ಸೋಲನ್ನು ಎದುರಿಸಿರುವ ವೆಸ್ಟ್ ಇಂಡೀಸ್ ತಂಡವು ಆರನೇ ಸ್ಥಾನದಲ್ಲಿದೆ.
IND vs ENG: ಈ ಆರು ಆಟಗಾರರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ
ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು
ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 427 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಅಂತಿಮವಾಗಿ ಭಾರತ ನೀಡಿದ 608 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 271 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಆಕಾಶ್ ದೀಪ್ 6 ವಿಕೆಟ್‌ಗಳನ್ನು ಕಬಳಿಸಿದರು. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 pm, Sun, 6 July 25