IND vs ENG: ಹಿಂದೆಂದೂ ಗೆಲ್ಲದ ಮೈದಾನದಲ್ಲಿ ಮೊದಲ ಗೆಲುವು ಸಾಧಿಸಿದ ಯಂಗ್ ಇಂಡಿಯಾ
India vs England, Edgbaston Test: ಶುಭ್ಮನ್ ಗಿಲ್ ನೇತೃತ್ವದ ಯುವ ಭಾರತೀಯ ಕ್ರಿಕೆಟ್ ತಂಡವು ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 336 ರನ್‌ಗಳ ಅದ್ಭುತ ಜಯವನ್ನು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ 58 ವರ್ಷಗಳ ಎಡ್ಜ್‌ಬಾಸ್ಟನ್ ಇತಿಹಾಸದಲ್ಲಿ ಮೊದಲ ಗೆಲುವು ಸಾಧಿಸಿದೆ. ಈ ಗೆಲುವು 2021ರ ಬ್ರಿಸ್ಬೇನ್‌ನಲ್ಲಿನ ಗೆಲುವಿನಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ತಂದಿದೆ.

ಒಂದು ತಂಡದ ಹೆಮ್ಮೆಯನ್ನು ಹೇಗೆ ಮುರಿಯಬಹುದು ಎಂಬುದನ್ನು ಯುವ ಆಟಗಾರರಿಂದ ತುಂಬಿರುವ ಭಾರತೀಯ ಕ್ರಿಕೆಟ್ ತಂಡವನ್ನು ನೋಡಿ ಕಲಿಯಬಹುದು. ಸುಮಾರು ನಾಲ್ಕೂವರೆ ವರ್ಷಗಳ ಹಿಂದೆ ಗಬ್ಬಾದಲ್ಲಿ ಆಸ್ಟ್ರೇಲಿಯಾದ ಹೆಮ್ಮೆಯನ್ನು ಛಿದ್ರಗೊಳಿಸಿದ್ದ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್‌ನಲ್ಲೂ ಅದೇ ಪ್ರದರ್ಶನವನ್ನು ಪುನರಾವರ್ತಿಸಿದೆ. ಶುಭ್‌ಮನ್ ಗಿಲ್ ನಾಯಕತ್ವದ ಯಂಗ್ ಇಂಡಿಯಾ, ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 336 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಇದರೊಂದಿಗೆ, 58 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಗೆಲುವು ದಾಖಲಿಸಿತು. ಅಲ್ಲದೆ, ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಗೆಲುವಿನ ಖಾತೆ ಕೂಡ ತೆರೆಯಿತು.
ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವು
1967 ರಲ್ಲಿ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ ಅಂದಿನಿಂದ 2025 ರವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ 8 ಪಂದ್ಯಗಳಲ್ಲಿ 7 ರಲ್ಲಿ ಟೀಂ ಇಂಡಿಯಾ ಸೋತಿದ್ದರೆ, 1986 ರಲ್ಲಿ ನಡೆದಿದ್ದ ಒಂದು ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಸ್ಟಾರ್ ಆಟಗಾರರು, ಲೆಜೆಂಡರಿ ಆಟಗಾರರು ಮತ್ತು ಬಲಿಷ್ಠ ನಾಯಕರ ಹೊರತಾಗಿಯೂ, ಟೀಂ ಇಂಡಿಯಾಗೆ ಎಡ್ಜ್‌ಬಾಸ್ಟನ್ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಹೊಸ ನಾಯಕ ಶುಭ್‌ಮನ್ ಗಿಲ್ ಮತ್ತು ಸ್ಟಾರ್ ಆಟಗಾರರಿಲ್ಲದೆ ಈ ಪಂದ್ಯಕ್ಕಿಳಿದಿದ್ದ ಟೀಂ ಇಂಡಿಯಾ ಅಂತಿಮವಾಗಿ ಈ ಸಾಧನೆ ಮಾಡಿತು. ಈ ಗೆಲುವು 2021 ರಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಗೆಲುವಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.
ಪಂದ್ಯ ಹೀಗಿತ್ತು
ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 336 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 587 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 407 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 180 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿತು. ಆ ಬಳಿಕ ಶುಭ್ಮನ್ ಗಿಲ್ ಅವರ ಶತಕದ ಸಹಾಯದಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 427 ರನ್‌ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 608 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಐದನೇ ದಿನದಾಟದ ಎರಡನೇ ಸೆಷನ್ನಲ್ಲಿ 271 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ಮುಂದೆ ಶರಣಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 pm, Sun, 6 July 25