
ಭಾರತ ಹಾಗೂ ಇಂಗ್ಲೆಂಡ್ ( India vs England) ಮಹಿಳಾ ತಂಡಗಳ ನಡುವೆ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 270 ರನ್‌ಗಳ ದಾಖಲೆಯ ಗೆಲುವು ಸಾಧಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ( Lord’s Women’s Test) ಪಂದ್ಯದಲ್ಲಿ ಮೊದಲ ದಿನದಿಂದಲೂ ಪಾರುಪತ್ಯ ಮೆರೆದ ಟೀಂ ಇಂಡಿಯಾ ಪಂದ್ಯದ ಕೊನೆಯ ದಿನದ ಮೊದಲ ಸೆಷನ್ನಲ್ಲಿ ಇಂಗ್ಲೆಂಡ್ ತಂಡವನ್ನು 186 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಲಾರ್ಡ್ಸ್‌ನಲ್ಲಿ ನಡೆದ ಮೊಟ್ಟ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಮೊದಲ ತಂಡವೆಂಬ ದಾಖಲೆಯನ್ನು ಬರೆಯಿತು. ಈ ಪಂದ್ಯದಲ್ಲಿ ಗೆಲುವಿಗೆ 457 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ, ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್ನಲ್ಲೂ ಕಳಪೆ ಪ್ರದರ್ಶನ ನೀಡಿತು. ಇದರ ಪರಿಣಾಮವಾಗಿ ಟೀಂ ಇಂಡಿಯಾ ಅಮೋಘ ಗೆಲುವು ದಾಖಲಿಸಿತು ಹಾಗೆಯೇ ಟಿ20 ಸರಣಿ ಸೋಲಿಗೆ ಸೇಡನ್ನು ತೀರಿಸಿಕೊಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 285 ರನ್ ಕಲೆಹಾಕಿತು. ತಂಡದ ಪರ ಉಪನಾಯಕಿ ಸ್ಮೃತಿ ಮಂಧಾನ 83 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 58 ರನ್ ಮತ್ತು ದೀಪ್ತಿ ಶರ್ಮಾ 57 ರನ್‌ಗಳ ಕಾಣಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 170 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಆಮಿ ಜೋನ್ಸ್ 52 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನ್ಯಾಟ್ ಸ್ಕೈವರ್-ಬ್ರಂಟ್ 44 ರನ್‌ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಇತ್ತ ಟೀಂ ಇಂಡಿಯಾ ಪರ ಕ್ರಾಂತಿ ಗೌಡ್ 37 ರನ್ ನೀಡಿ 5 ವಿಕೆಟ್ ಪಡೆದರೆ, ಸಯಾಲಿ ಸತ್ಘರೆ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ 115 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆಯಿತು. ಈ ಇನ್ನಿಂಗ್ಸ್ನಲ್ಲೂ ಸ್ಮೃತಿ ಮಂಧಾನ 70 ರನ್‌ಗಳ ಇನ್ನಿಂಗ್ಸ್ ಆಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ಯಾಸ್ತಿಕಾ ಭಾಟಿಯಾ ಸ್ಮರಣೀಯ ಶತಕ ಸಿಡಿಸಿ ಮಿಂಚಿದರು. ಯಾಸ್ತಿಕಾ ಭಾಟಿಯಾ 158 ಎಸೆತಗಳಲ್ಲಿ 113 ರನ್ ಬಾರಿಸಿದರೆ, ವಿಕೆಟ್ ಕೀಪರ್ ರಿಚಾ ಘೋಷ್ 52 ಎಸೆತಗಳಲ್ಲಿ 50 ರನ್ ಗಳಿಸಿದರು. ಪರಿಣಾಮವಾಗಿ, ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 341 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್‌ಗೆ ಗೆಲ್ಲಲು 457 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
IND vs ENG: ಲಾರ್ಡ್ಸ್‌ನಲ್ಲಿ ಟೆಸ್ಟ್ ಅರ್ಧಶತಕ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಸ್ಮೃತಿ ಮಂಧಾನ
457 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಕಳಪೆ ಆರಂಭ ಪಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದ ಕ್ರಾಂತಿ, ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಲೆಜೆಂಡರಿ ಆರಂಭಿಕ ಆಟಗಾರ್ತಿ ಟ್ಯಾಮಿ ಬ್ಯೂಮಾಂಟ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದರು. ಇದರ ನಂತರವೂ ಇಂಗ್ಲೆಂಡ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ತಂಡದ ಪರ ಕೊಂಚ ಹೋರಾಟ ನೀಡಿದ ಆಮಿ ಜೋನ್ಸ್ 54 ರನ್‌ಗಳ ಇನ್ನಿಂಗ್ಸ್ ಆಡಿದರೆ, ಸೋಫಿ ಎಕ್ಲೆಸ್ಟೋನ್ ಕೂಡ ಕೊನೆಯಲ್ಲಿ 50 ರನ್ ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದವರಿಂದ ಅದೇ ಸಪ್ಪೆ ಪ್ರದರ್ಶನ ಮೂಡಿಬಂತು. ಅಂತಿಮವಾಗಿ ಇಂಗ್ಲೆಂಡ್ 186 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಸ್ನೇಹ್ ರಾಣಾ ಗರಿಷ್ಠ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಸಯಾಲಿ ಸತ್ಘರೆ, ಕ್ರಾಂತಿ ಗೌರ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.
Published On - 5:13 pm, Mon, 13 July 26