IND vs ENG: ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಮಹಿಳಾ ಆಟಗಾರ್ತಿ ಯಾಸ್ತಿಕಾ ಭಾಟಿಯಾ
Yastika Bhatia Makes History: ಲಾರ್ಡ್ಸ್ ಟೆಸ್ಟ್‌ನಲ್ಲಿ ಯಾಸ್ತಿಕಾ ಭಾಟಿಯಾ ಇತಿಹಾಸ ಸೃಷ್ಟಿಸಿದ್ದಾರೆ. ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದರು. ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಶತಕ ಭಾರತ ತಂಡಕ್ಕೆ 400ಕ್ಕೂ ಅಧಿಕ ರನ್‌ಗಳ ಬೃಹತ್ ಮುನ್ನಡೆ ಗಳಿಸಲು ನೆರವಾಯಿತು.

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಮಹಿಳಾ (India vs England women) ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನದಾಟದಂದು ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ (Yastika Bhatia) ತಮ್ಮ ವೃತ್ತಿಜೀವನದ ಮೊಟ್ಟ ಮೊದಲ ಟೆಸ್ಟ್ ಶತಕ ಬಾರಿಸಿದರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಶತಕದ ಇನ್ನಿಂಗ್ಸ್ ಆಡುವ ಮೂಲಕ ಯಾಸ್ತಿಕಾ, ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಶತಕ ಬಾರಿಸಿದ ಮೊಟ್ಟ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಯಾಸ್ತಿಕಾ ಅವರ ಈ ಶತಕದ ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 300 ರನ್‌ಗಳ ಗಡಿ ದಾಟಿದೆ. ಮಾತ್ರವಲ್ಲದೆ ತಂಡದ ಮುನ್ನಡೆ 400 ರನ್‌ಗಳ ಗಡಿ ದಾಟಿದೆ.
ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯಸ್ತಿಕಾ ಭಾಟಿಯಾ ಈ ಐತಿಹಾಸಿಕ ಮೈಲಿಗಲ್ಲು ಸಾಧಿಸಿದರು. ಪಂದ್ಯದ ಎರಡನೇ ದಿನದಾಟದಂದು 39 ರನ್ ಬಾರಿಸಿ ಅಜೇಯರಾಗಿ ಹಿಂತಿರುಗಿದ್ದ ಯಸ್ತಿಕಾ ಮೂರನೇ ದಿನದಂದು ತಮ್ಮ ಇನ್ನಿಂಗ್ಸ್ ಮುಂದುವರೆಸಿದರು. ಮೊದಲಿಗೆ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಅರ್ಧಶತಕ ಬಾರಿಸಿದ ಯಾಸ್ತಿಕಾ, ಆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
113 ರನ್‌ಗಳ ಇನ್ನಿಂಗ್ಸ್ ಆಡಿದ ಯಾಸ್ತಿಕಾ
ಕೇವಲ 145 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ಯಾಸ್ತಿಕಾಗೆ ಈ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು 158 ಎಸೆತಗಳನ್ನು ಎದುರಿಸಿ 14 ಬೌಂಡರಿಗಳ ಸಹಿತ 113 ರನ್ ಗಳಿಸಿ ಔಟಾದರು. ಯಾಸ್ತಿಕಾ ತಮ್ಮ ಶತಕದ ಇನ್ನಿಂಗ್ಸ್ ಜೊತೆಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ ಅವರೊಂದಿಗೆ ಎರಡನೇ ವಿಕೆಟ್‌ಗೆ 73 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆ ಬಳಿಕ ದೀಪ್ತಿ ಶರ್ಮಾ ಅವರೊಂದಿಗೆ ಐದನೇ ವಿಕೆಟ್‌ಗೆ 52 ರನ್‌ಗಳ ಅರ್ಧಶತಕದ ಜೊತೆಯಾಟವನ್ನು ನಡೆಸಿದರು.
ಸಂಧ್ಯಾ ದಾಖಲೆ ಮುರಿದ ಯಾಸ್ತಿಕಾ
ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನ್ನಿಂಗ್ಸ್‌ನಲ್ಲಿ 113 ರನ್‌ಗಳ ಇನ್ನಿಂಗ್ಸ್ ಆಡಿದ ಯಾಸ್ತಿಕಾ, ಮಹಿಳಾ ಟೆಸ್ಟ್‌ನ ಮೂರನೇ ಅಥವಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಮೂಲಕ 1985 ರಲ್ಲಿ ಲಕ್ನೋದಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ 98 ರನ್‌ಗಳ ಇನ್ನಿಂಗ್ಸ್ ಆಡಿದ್ದ ಸಂಧ್ಯಾ ಅಗರ್ವಾಲ್ ಅವರ ದಾಖಲೆಯನ್ನು ಮುರಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Sun, 12 July 26




