INDW vs THAIW: ಮಹಿಳಾ ಏಷ್ಯಾಕಪ್ನಲ್ಲಿಂದು ಸೆಮಿ ಫೈನಲ್ ಕದನ: ಭಾರತಕ್ಕೆ ಥೈಲೆಂಡ್ ಎದುರಾಳಿ
Womens Asia Cup T20 2022: ಇಂದು ಸೈಲೆಟ್ನ ಸೈಲೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಥೈಲೆಂಡ್ ವಿರುದ್ಧ ಭಾರತ (India Women vs Thailand Women) ಮೊದಲ ಸೆಮಿ ಫೈನಲ್‍ನಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಲಗ್ಗೆಯಿಟ್ಟರೆ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
ಮಹಿಳಾ ಏಷ್ಯಾಕಪ್ ಟಿ20 2022 ರಲ್ಲಿ (Womens Asia Cup T20 2022) ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿರುವ ಭಾರತ ಮಹಿಳಾ ತಂಡ ಇದೀಗ ಸೆಮಿ ಫೈನಲ್ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಸೈಲೆಟ್ನ ಸೈಲೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಥೈಲೆಂಡ್ ವಿರುದ್ಧ ಭಾರತ (India Women vs Thailand Women) ಮೊದಲ ಸೆಮಿ ಫೈನಲ್‍ನಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಲಗ್ಗೆಯಿಟ್ಟರೆ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಲೀಗ್ ಹಂತದಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದು ಭಾರತ ಈಗಲೂ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ ಥೈಲೆಂಡ್ ಆಡಿದ ಆರು ಪಂದ್ಯಗಳಲ್ಲಿ ಮೂರು ಸೋಲು ಮೂರು ಗೆಲುವಿನೊಂದಿಗೆ ಅಚ್ಚರಿ ಎಂಬಂತೆ ಸೆಮೀಸ್ಗೆ ಲಗ್ಗೆಯಿಟ್ಟಿದೆ. ಹರ್ಮನ್‌ಪ್ರೀತ್ (Harmanpreet Kaur) ಪಡೆಗೆ ಥೈಲೆಂಡ್ ದೊಡ್ಡ ಸವಾಲು ಅಲ್ಲದಿದ್ದರೂ ಈ ಬಾರಿ ಊಹಿಸಲಾಗದ ಪ್ರದರ್ಶನ ನೀಡಿರುವ ಥೈಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ.
ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಓಪನರ್ ಸ್ಮೃತಿ ಮಂದಾನ ಸರಿಯಾದ ಕ್ರಮಾಂಕದಲ್ಲಿ ಆಡೇ ಇಲ್ಲ. ಇಂದು ಮಹತ್ವದ ಪಂದ್ಯ ಆಗಿರುವುದರಿಂದ ಶಫಾಲಿ ವರ್ಮಾ ಜೊತೆ ಸ್ಮೃತಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮೆಘನಾ, ರೋಡ್ರಿಗಸ್, ಪೂಜಾ ವಸ್ತ್ರಾಕರ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ದೀಪ್ತಿ ಶರ್ಮಾ ತಂಡದ ಪ್ರಮುಖ ಬೌಲಿಂಗ್ ಆಸ್ತಿ. ಇವರಿಗೆ ಸ್ನೇಹ್ ರಾಣ, ರಾಧಾ ಯಾದವ್ ಹಾಗೂ ರೇಣುಕಾ ಸಿಂಗ್ ಸಾಥ್ ನೀಡಬೇಕಿದೆ.
ಇತ್ತ ಥೈಲೆಂಡ್ ಭಾರತ ವಿರುದ್ಧದ ಕೊನೆಯ ಪಂದ್ಯಗಳಲ್ಲಿ ಕೆಟ್ಟ ಆಟವಾಡಿರಬಹುದು, ಆದರೆ ಅವರನ್ನು ಎಂದಿಗೂ ಲಘುವಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಬಲಿಷ್ಠ ಪಾಕಿಸ್ತಾನ ತಂಡವನ್ನೇ ಮಣಿಸಿರುವುದನ್ನು ಗಮನಿಸಬೇಕಿದೆ. ಈ ಟೂರ್ನಿಯಲ್ಲಿ ಥೈಲ್ಯಾಂಡ್ 3 ಪಂದ್ಯಗಳನ್ನು ಗೆದ್ದಿದೆ ಮತ್ತು ಗೆಲ್ಲುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಎದುರಾಳಿಯು ಭಾರತವೇ ಆದರೂ ಈ ಸ್ವರೂಪದಲ್ಲಿ ನಿರ್ದಿಷ್ಟ ದಿನದಂದು ಯಾರು ಬೇಕಾದರೂ ಗೆಲ್ಲಬಹುದು. ತಂಡದಲ್ಲಿ ನರುಮೊಲ್ ಚಯ್ವೈ, ನಾನ್ಪತ್, ಚಂಥಮ್, ಚನಿದಾ, ಸೊರ್ನರಿನ್ರಂತಹ ಸ್ಟಾರ್ ಬ್ಯಾಟರ್ಗಳಿದ್ದಾರೆ.
ಹಿಂದಿನ ಪಂದ್ಯದಲ್ಲಿ ಏನಾಗಿತ್ತು?:
ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ಕಳೆದ ಪಂದ್ಯದಲ್ಲಿ ಥೈಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿತ್ತು. ಇದು ಭಾರತ ಮಹಿಳಾ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಭಾರತ ವನಿತೆಯರು ಥೈಲೆಂಡ್ ತಂಡವನ್ನು ಕೇವಲ 15.1 ಓವರ್‌ಗಳಲ್ಲಿ ಕೇವಲ 37 ರನ್‌ಗಳಿಗೆ ಆಲೌಟ್ ಮಾಡಿದರು. ಸ್ನೇಹ ರಾಣಾ 3 ವಿಕೆಟ್ ಪಡೆದರು. ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 6 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಸೈಲೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಸೆಮಿ ಫೈನಲ್ ಪಂದ್ಯ ಭಾರತದ ಕಾಲಮಾನದ ಪ್ರಕಾರ ಬೆಳಗ್ಗೆ 8:30ಕ್ಕೆ ಶುರುವಾಗಲಿದೆ. 8 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಹಾಗೂ ದೂರದರ್ಶನದಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಹಾಗೆಯೆ ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ನೋಡಬಹುದು.
ಭಾರತ ಮಹಿಳಾ ಸಂಭಾವ್ಯ ತಂಡ: ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್.
ಪಾಕ್- ಲಂಕಾ ಮುಖಾಮುಖಿ:
ಇಂದು ನಡೆಯಲಿರುವ ಎರಡನೇ ಸೆಮಿ ಫೈನಲ್‍ನಲ್ಲಿ ಶ್ರೀಲಂಕಾ ಮಹಿಳಾ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕ್ ವನಿತೆಯರು ಟೂರ್ನಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಕೈಚೆಲ್ಲಿ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಪಡೆದಿದೆ. ಶ್ರೀಲಂಕಾ ತಂಡ ಟೂರ್ನಿಯಲ್ಲಿ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು ಮೂರನೇ ಸ್ಥಾನ ಪಡೆದಿದೆ.
Published On - 7:45 am, Thu, 13 October 22