IPL 2022: ರಾಜಸ್ಥಾನ್ ಪಾಲಿಗೆ ವರ್ಕ್ ಆದ ಅಶ್ವಿನ್ ರಿಟೈರ್ಡ್ ಔಟ್ ಪ್ಲ್ಯಾನ್
IPL 2022: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಔಟ್ ಆಗದೇ ರಿಟೈರ್ಡ್ ಔಟ್ ಘೋಷಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸದ ಭಾಗವಾಗಿದ್ದಾರೆ. ಅವರ ಈ ನಿರ್ಧಾರವು ತಂಡದ ಗೆಲುವಿಗೂ ಕೂಡ ಕಾರಣವಾಗಿದ್ದು ವಿಶೇಷ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉಂಟಾದ ಕುಸಿತದ ಬೆನ್ನಲ್ಲೇ ಆರ್ ಅಶ್ವಿನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಶಿಮ್ರಾನ್ ಹೆಟ್ಮೆಯರ್ಗೆ ಉತ್ತಮ ಸಾಥ್ ನೀಡಿದರು. 23 ಎಸೆತಗಳಲ್ಲಿ 28 ರನ್ ಬಾರಿಸಿದ್ದ ಅಶ್ವಿನ್ 18.2 ಓವರ್ ವೇಳೆ ದಿಢೀರಣೆ ರಿಟೈರ್ಡ್ ಔಟ್ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ರಿಟೈರ್ಡ್ ಔಟ್ ಆದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅಶ್ವಿನ್ ಪಾತ್ರರಾದರು. ಇದೀಗ ಅಶ್ವಿನ್ ಅವರ ಈ ನಿರ್ಧಾರವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕುಮಾರ್ ಸಂಗಾಕ್ಕರ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಗಾಕ್ಕರ, ಸರಿಯಾದ ಸಮಯದಲ್ಲಿ ‘ನಿವೃತ್ತಿ’ ಮಾಡುವ ಮೂಲಕ ಆರ್ ಅಶ್ವಿನ್ ಪಂದ್ಯದ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್ ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ. ಏನು ಮಾಡಬೇಕೆಂದು ನಾವು ಮೊದಲೇ ಚರ್ಚಿಸಿದ್ದೇವೆ. ದಕ್ಷಿಣ ಆಫ್ರಿಕಾದ ವ್ಯಾನ್ ಡೆರ್ ಡಸ್ಸೆನ್ ಅವರು ಈ ಬಾರಿ ಮೊದಲ ಪಂದ್ಯವನ್ನು ಆಡಿದ್ದರು. ಆದರೆ ಕೇವಲ 4 ರನ್ಗಳಿಸಿ ಔಟಾಗಿದ್ದರು. ಈ ವೇಳೆ ಅಶ್ವಿನ್ ಅವರನ್ನು ಕಳುಹಿಸಲಾಗಿತ್ತು. ಅಲ್ಲದೆ ಬ್ಯಾಟ್ಸ್ಮನ್ ಆಗಿದ್ದ ರಿಯಾನ್ ಪರಾಗ್ ಅವರನ್ನು 7ನೇ ಕ್ರಮಾಂಕದಲ್ಲಿ ಇರಿಸಲಾಗಿತ್ತು. ಪಂದ್ಯ ಅಂತಿಮ ಘಟ್ಟದಲ್ಲಿ ತಮ್ಮಗಿಂತ ಉತ್ತಮವಾಗಿ ಬ್ಯಾಟ್ ಮಾಡಬಲ್ಲ ಆಟಗಾರನಿಗೆ ಅವಕಾಶ ನೀಡುವ ಸಲುವಾಗಿ ಅಶ್ವಿನ್ ರಿಟೈರ್ಡ್ ಔಟ್ ನೀಡುವ ಮೂಲಕ ಪೆವಿಲಿಯನ್ಗೆ ಮರಳಿದ್ದರು. ಈ ವೇಳೆ ಕಣಕ್ಕಿಳಿದ ರಿಯಾನ್ ಪರಾಗ್ ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು 165 ರನ್‌ಗಳಿಗೆ ಕೊಂಡೊಯ್ದರು. ಈ ಪಂದ್ಯವನ್ನು ರಾಯಲ್ಸ್ ಮೂರು ರನ್‌ಗಳಿಂದ ಗೆದ್ದುಕೊಂಡಿತು.
ಅಂತಿಮ ಹಂತದಲ್ಲಿ ಬ್ಯಾಟಿಂಗ್ನಿಂದ ಹಿಂದೆ ಸರಿದ ಅಶ್ವಿನ್ ಅವರ ಈ ನಿರ್ಧಾರದಿಂದ ಕೋಚ್ ಕುಮಾರ್ ಸಂಗಾಕ್ಕರ ಸಂತಸಗೊಂಡಿದ್ದಾರೆ. ಒಬ್ಬ ಆಟಗಾರನೇ ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳು ಪಂದ್ಯದ ಫಲಿತಾಂಶವನ್ನು ಬದಲಿಸುತ್ತದೆ. ಅದರಂತೆ ನಾವು 3 ರನ್‌ಗಳಿಂದ ಗೆದ್ದಿದ್ದೇವೆ. ಇಂತಹ ಪ್ರಯೋಗಗಳು ಮುಂದಿನ ಪಂದ್ಯಗಳಲ್ಲೂ ಕಂಡು ಬರಲಿದೆ ಎಂದು ರಾಜಸ್ಥಾನ್ ರಾಯಲ್ಸ್ ಕೋಚ್ ಸಂಗಾಕ್ಕರ ಹೇಳಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಔಟ್ ಆಗದೇ ರಿಟೈರ್ಡ್ ಔಟ್ ಘೋಷಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಹೊಸ ಇತಿಹಾಸದ ಭಾಗವಾಗಿದ್ದಾರೆ. ಅವರ ಈ ನಿರ್ಧಾರವು ತಂಡದ ಗೆಲುವಿಗೂ ಕೂಡ ಕಾರಣವಾಗಿದ್ದು ಈಗ ವಿಶೇಷ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?