IPL 2022: ಸತತ ಸೋಲಿನೊಂದಿಗೆ ಸಂಕಷ್ಟಕ್ಕೆ ಸಿಲುಕಿದ ಕೆಎಲ್ ರಾಹುಲ್ ಪಡೆ
IPL 2022 Playoffs Scenario: ಒಂದು ವೇಳೆ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋತರೆ ನೆಟ್ ರನ್ ರೇಟ್ ಕಾರಣದಿಂದ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು.
IPL 2022: ಈ ಬಾರಿಯ ಐಪಿಎಲ್ ರೋಚಕ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ. ಏಕೆಂದರೆ ವಾರದ ಹಿಂದೆಯಷ್ಟೇ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡವೊಂದು ಇದೀಗ ಪ್ಲೇಆಫ್ ಪ್ರವೇಶಿಸಲು ಮಾಡು ಇಲ್ಲವೇ ಮಡಿ ಪಂದ್ಯವಾಡಬೇಕಾಗಿ ಬಂದಿದೆ. ಹೌದು, ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು 11 ಪಂದ್ಯಗಳಲ್ಲಿ 9 ಗೆಲುವು ದಾಖಲಿಸಿ 16 ಪಾಯಿಂಟ್ಸ್ ಕಲೆಹಾಕಿತ್ತು. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಪ್ಲೇಆಫ್ ಗೇರುವ ಸನಿಹದಲ್ಲಿತ್ತು. ಆದರೆ ಆ ಬಳಿಕ ನಡೆದ ಪಂದ್ಯಗಳಲ್ಲಿ ಲಕ್ನೋ ತಂಡದ ಲೆಕ್ಕಚಾರಗಳು ತಲೆಕೆಳಗಾಗಿದೆ. ಆಡಿದ 2 ಪಂದ್ಯಗಳಲ್ಲೂ ಸೋಲುವ ಮೂಲಕ ಇದೀಗ 13 ಪಂದ್ಯಗಳಿಂದ 16 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.
ಪ್ಲೇಆಫ್ಗೆ ಪ್ರವೇಶಿಸಲು ಬೇಕಿದ್ದ ಒಂದು ಗೆಲುವಿನ ಹುಡುಕಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಕೇವಲ 82 ರನ್ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಮೂಡಿಸಿತು. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆದ್ದು ಪ್ಲೇಆಫ್ ಪ್ರವೇಶಿಸಲಿದೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಆರ್ಆರ್ ವಿರುದ್ದದ ಪಂದ್ಯದಲ್ಲೂ 24 ರನ್ಗಳಿಂದ ಸೋಲನುಭವಿಸಿದೆ. ಇತ್ತ ಕಳೆದ 2 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ ಪ್ರವೇಶಿಸಲು ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಂದಿದೆ. ಕೆಕೆಆರ್ ವಿರುದ್ದ ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆದ್ದರೆ ಮಾತ್ರ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ ಪ್ರವೇಶಿಸಬಹುದು.
ಒಂದು ವೇಳೆ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋತರೆ ನೆಟ್ ರನ್ ರೇಟ್ ಕಾರಣದಿಂದ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು. ಅಂದರೆ ಇಲ್ಲಿ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಸೋತರೆ 16 ಪಾಯಿಂಟ್ಸ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಅಥವಾ4ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಇತ್ತ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೂ 16 ಪಾಯಿಂಟ್ಸ್ಗಳಿಸುವ ಅವಕಾಶವಿದೆ. ಹಾಗೆಯೇ ಆರ್ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೆ 16 ಪಾಯಿಂಟ್ಸ್ ಆಗಲಿದೆ.
ಹೀಗಾಗಿ ಕೆಕೆಆರ್ ವಿರುದ್ದ ಲಕ್ನೋ ಸೂಪರ್ ಜೈಂಟ್ಸ್ ಸೋತರೆ, ಲೀಗ್ ಹಂತದ ಕೊನೆಯ ಆರ್ಸಿಬಿ, ಪಂಜಾಬ್ ಕಿಂಗ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ರನ್ ರೇಟ್ ಲೆಕ್ಕಾಚಾರಗಳು ಬರಲಿದೆ. ಇಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಪಂಜಾಬ್ ಕಿಂಗ್ಸ್ ಉತ್ತಮ ನೆಟ್ ರನ್ ರೇಟ್ ಪಡೆದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಪ್ಲೇಆಫ್ನಿಂದ ಹೊರಬೀಳಬಹುದು.
ಏಕೆಂದರೆ ಗುಜರಾತ್ ಟೈಟನ್ಸ್ ವಿರುದ್ದ ಆರ್ಸಿಬಿ ಭರ್ಜರಿ ಜಯ ಸಾಧಿಸಿದ್ರೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಪಂಜಾಬ್ ಕಿಂಗ್ಸ್ ತಂಡಗಳು ಮುಂದಿನ 2 ಪಂದ್ಯಗಳಲ್ಲಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲುವು ದಾಖಲಿಸಿದರೆ ಪಾಯಿಂಟ್ಸ್ ಟೇಬಲ್ನಲ್ಲಿ ಬದಲಾವಣೆ ಆಗಲಿದೆ. ಇದರಿಂದ ನೆಟ್ ರನ್ ರೇಟ್ ಕಾರಣದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು 5ನೇ ಸ್ಥಾನಕ್ಕೆ ಕುಸಿಯಬಹುದು. ಹೀಗಾಗಿ ಕೆಕೆಆರ್ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಪ್ರವೇಶಿಸಬೇಕಾದ ಅನಿವಾರ್ಯತೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಮುಂದಿದೆ.
ಒಟ್ಟಿನಲ್ಲಿ ಸತತ ಗೆಲುವಿನ ಮೂಲಕ ನಾಗಾಲೋಟ ಮುಂದುವರೆಸಿದ್ದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಸೋಲುವ ಮೂಲಕ ಇದೀಗ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿದೆ. ಅದರಂತೆ ಕೆಕೆಆರ್ ವಿರುದ್ದ ಗೆಲ್ಲುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.