IPL 2022: ಎಲ್ಲಾ ತಂಡಗಳಿಗೂ RCBಯ ಈ ಮೂವರದ್ದೇ ಭಯ..!
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್.
ಐಪಿಎಲ್ ಸೀಸನ್ 15 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಟೂರ್ನಿಗಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ದತೆಯಲ್ಲಿದೆ. ಮೇಲ್ನೋಟಕ್ಕೆ ಎಲ್ಲಾ ತಂಡಗಳು ಬಲಿಷ್ಠವಾಗಿದೆ. ಇದಾಗ್ಯೂ ಕೆಲ ತಂಡಗಳಲ್ಲಿ ಸ್ಟಾರ್ ಬ್ಯಾಟ್ಸ್ಮನ್ಗಳಿದ್ದರೆ, ಮತ್ತೆ ಕೆಲ ತಂಡದಲ್ಲಿ ಅತ್ಯುತ್ತಮ ಬೌಲರ್ಗಳಿದ್ದಾರೆ. ಅದರಲ್ಲೂ ಆರ್‌ಸಿಬಿ ತ್ರಿಮೂರ್ತಿಗಳ ಮೂಲಕ ಈ ಬಾರಿ ಮತ್ತಷ್ಟು ಬಲಿಷ್ಠವಾಗಿ ರೂಪುಗೊಂಡಿದೆ ಎಂದರೆ ತಪ್ಪಾಗಲಾರದು. ಪ್ರತಿ ಬಾರಿ ಆರ್‌ಸಿಬಿ ತಂಡವು ಕಳಪೆ ಬೌಲಿಂಗ್‌ನಿಂದಾಗಿ ಟೀಕೆಗೆ ಒಳಗಾಗುತ್ತಿತ್ತು. ಇದಾಗ್ಯೂ ಕಳೆದ ಸೀಸನ್ನಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗವು ತುಸು ಬಲಿಷ್ಠವಾಗಿತ್ತು. ಆದರೆ ಈ ಬಾರಿ ಆರ್‌ಸಿಬಿ ಪೇಸ್ ಅಟ್ಯಾಕ್ ಮತ್ತಷ್ಟು ಬಲಿಷ್ಠವಾಗಿದೆ.
ಹೌದು, ಈ ಬಾರಿ ಆರ್‌ಸಿಬಿ ತಂಡದಲ್ಲಿ ತ್ರಿಮೂರ್ತಿಗಳಾಗಿ ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಈ ಮೂವರು ಬೌಲರ್ಗಳು ಈಗಾಗಲೇ ಐಪಿಎಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಅಂದರೆ ಜೋಶ್ ಹ್ಯಾಝಲ್ವುಡ್ ಪವರ್ಪ್ಲೇನಲ್ಲಿ ಅತ್ಯುತ್ತಮವಾಗಿ ದಾಳಿ ಸಂಘಟಿಸಿದರೆ, ಮೊಹಮ್ಮದ್ ಸಿರಾಜ್ ಪವರ್ಪ್ಲೇನಲ್ಲಿ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು ಹರ್ಷಲ್ ಪಟೇಲ್ ಡೆತ್ ಬೌಲರ್ಗಳಾಗಿ ಕಳೆದ ಸೀಸನ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದರು. ಇದೀಗ ಇದೇ ಕಾಂಬಿನೇಷನ್ನಲ್ಲಿ ಆರ್‌ಸಿಬಿ ಈ ಬಾರಿ ಕಣಕ್ಕಿಳಿಯಲಿದೆ.
ಪರ್ಪಲ್ ಪಟೇಲ್: ಆರ್‌ಸಿಬಿಯ ಹರ್ಷಲ್ ಪಟೇಲ್ ಅತ್ಯಂತ ಯಶಸ್ವಿ ಬೌಲರ್. ಕಳೆದ ಸೀಸನ್ನಲ್ಲಿ ಪಟೇಲ್ ಆರ್‌ಸಿಬಿ ಪರ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಈ ವೇಳೆ 27 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ 32 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಹರ್ಷಲ್ ಪಟೇಲ್ ಅವರ ಬೌಲಿಂಗ್‌ನಿಂದಾಗಿ ತಂಡವು ಪ್ಲೇ ಆಫ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದೇ ಕಾರಣದಿಂದ ಈ ಬಾರಿ ಆರ್‌ಸಿಬಿ 10 ಕೋಟಿ 75 ಲಕ್ಷಕ್ಕೆ ಹರ್ಷಲ್ ಅವರನ್ನು ಮತ್ತೆ ಖರೀದಿಸಿತು. ಹೀಗಾಗಿ ಈ ಬಾರಿ ಕೂಡ ಹರ್ಷಲ್ ಪಟೇಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಕಳೆದ ಬಾರಿಯಂತೆ ಈ ಸಲ ಕೂಡ ಮಿಂಚಿನ ದಾಳಿ ಸಂಘಟಿಸುವ ಇರಾದೆಯಲ್ಲಿದ್ದಾರೆ.
ಜೋಶ್ ಹ್ಯಾಝಲ್‌ವುಡ್: ಜೋಶ್ ಹ್ಯಾಝಲ್‌ವುಡ್ ಆರ್‌ಸಿಬಿ ತಂಡದಲ್ಲಿರುವ ಎರಡನೇ ಅಪಾಯಕಾರಿ ಬೌಲರ್. ಆಸ್ಟ್ರೇಲಿಯಾದ ಅನುಭವಿ ವೇಗಿ ಪವರ್ ಪ್ಲೇನಿಂದ ಡೆತ್ ಓವರ್‌ಗಳವರೆಗೆ ಬೌಲಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಕಳೆದ ಸೀಸನ್ನಲ್ಲಿ ಹ್ಯಾಝಲ್ವುಡ್ CSK ತಂಡದ ಭಾಗವಾಗಿದ್ದರು. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಉತ್ತಮವಾಗಿ ಬಳಸಿಕೊಂಡಿದ್ದರು. ಹ್ಯಾಝಲ್‌ವುಡ್ ರನ್‌ಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ ವಿಕೆಟ್‌ಗಳನ್ನು ಕಬಳಿಸುವ ಕೌಶಲ್ಯವನ್ನು ಸಹ ತಿಳಿದಿದ್ದಾರೆ. ಕಳೆದ ಸೀಸನ್ನಲ್ಲಿ 11 ವಿಕೆಟ್‌ಗಳನ್ನು ಪಡೆದಿರುವ ಜೋಶ್ ಹ್ಯಾಝಲ್‌ವುಡ್ ಹೆಚ್ಚಿನ ರನ್ ಬಿಟ್ಟುಕೊಟ್ಟಿಲ್ಲ ಎಂಬುದು ವಿಶೇಷ.
ಮೊಹಮ್ಮದ್ ಸಿರಾಜ್: ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿತ್ತು. ಒಬ್ಬ ಆಟಗಾರನನ್ನು ಉಳಿಸಿಕೊಳ್ಳಬೇಕಿದ್ದರೆ ಆತನ ಅವಶ್ಯಕತೆಯೇನು ಎಂಬುದು ತಂಡಕ್ಕೆ ಗೊತ್ತಿರುತ್ತದೆ. ಏಕೆಂದರೆ ಕಳೆದ ಕೆಲ ಸೀಸನ್ಗಳಿಂದ ಸಿರಾಜ್ ಆರ್ಸಿಬಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕೊನೆಯ ಓವರ್ ಎಸೆದು ಪಂದ್ಯಗಳನ್ನೂ ಕೂಡ ಗೆಲ್ಲಿಸಿಕೊಟ್ಟಿದ್ದಾರೆ. ಸದಾ ಉತ್ಸಾಹದ ಚಿಲುಮೆಯಲ್ಲಿರುವ ಸಿರಾಜ್ ಅವರು ಯಾವುದೇ ಸಂದರ್ಭದಲ್ಲಿ ಪುಟಿದೇಳುವಂತಹ ಬೌಲರ್. ಹೀಗಾಗಿ ಸಿರಾಜ್ ಅವರನ್ನು ಯಾವ ಹಂತದಲ್ಲೂ ಬೇಕಾದರೂ ಬಳಸಿಕೊಳ್ಳಬಹುದು. ಹೀಗಾಗಿ ಈ ಸಲ ಕೂಡ ಆರ್‌ಸಿಬಿ ಪರ ಸಿರಾಜ್ ಕರಾರುವಾಕ್ ದಾಳಿ ಸಂಘಟಿಸುವ ವಿಶ್ವಾಸದಲ್ಲಿದ್ದಾರೆ.
ಒಟ್ಟಿನಲ್ಲಿ ಹರ್ಷಲ್ ಪಟೇಲ್ ಅವರ ಸ್ಲೋ ಎಸೆತ, ಜೋಶ್ ಹ್ಯಾಝಲ್‌ವುಡ್ ಅವರ ಪುಟಿದೇಳು ಬೌಲಿಂಗ್ ಮತ್ತು ಸಿರಾಜ್ ಅವರ ಮಾರಕ ದಾಳಿ ಉಳಿದ 9 ತಂಡಗಳ ಬ್ಯಾಟ್ಸ್ಮನ್ಗಳಿಗೆ ಹೊಸ ಸವಾಲಾಗುವುದರಲ್ಲಿ ಸಂದೇಹವೇ ಇಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?