IPL 2022: ಕ್ಯಾಚ್ ವಿವಾದ: ಅಂಪೈರ್ ವಿರುದ್ದ ದೂರು ದಾಖಲಿಸಿದ SRH

IPL 2022: ಕ್ಯಾಚ್ ವಿವಾದ: ಅಂಪೈರ್ ವಿರುದ್ದ ದೂರು ದಾಖಲಿಸಿದ SRH
Kane Williamson Catch

IPL 2022: ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್.

TV9kannada Web Team

| Edited By: Zahir PY

Apr 02, 2022 | 3:41 PM

ಐಪಿಎಲ್ ಸೀಸನ್ 15 (IPL 2022) ಆರಂಭದಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಅದು ಕೂಡ ಅಂಪೈರ್ ತೀರ್ಪಿನಿಂದಾಗಿ ಎಂಬುದು ವಿಶೇಷ. ಸನ್‌ರೈಸರ್ಸ್ ಹೈದರಾಬಾದ್ (SRH vs RR) ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಮೂರನೇ ಅಂಪೈರ್ ಕ್ಯಾಚ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಟಿವಿ ಅಂಪೈರ್ ಔಟ್ ತೀರ್ಪು ನೀಡಿರುವ ಬಗ್ಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಸಮಾಧಾನ ಹೊರಹಾಕಿದೆ. ಅಲ್ಲದೆ ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಗೆ ಅಧಿಕೃತ ದೂರು ಸಲ್ಲಿಸಿದೆ.

ಮೂರನೇ ಅಂಪೈರ್ ನೀಡಿರುವ ಈ ವಿವಾದಾತ್ಮಕ ತೀರ್ಪಿನ ಬಗ್ಗೆ ನಾವು ಐಪಿಎಲ್​ ಆಡಳಿತ ಮಂಡಳಿಗೆ ಪತ್ರ ಬರೆದಿದ್ದೇವೆ. ಈ ದೂರಿನಲ್ಲಿ ಮೂರನೇ ಅಂಪೈರ್ ಕೆಎನ್ ಅನಂತ್ ಪದ್ಮನಾಭನ್ ಅವರ ಈ ನಿರ್ಧಾರದ ಬಗ್ಗೆ ನಾವು ನಮ್ಮ ಆಕ್ಷೇಪಣೆಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಹೈದರಾಬಾದ್ ತಂಡದ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2022 ರ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಹೀನಾಯವಾಗಿ ಸೋಲನುಭವಿಸಿತ್ತು. ಎಸ್​ಆರ್​ಹೆಚ್​ ತಂಡದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಅವರ ಚೆಂಡು ಕೇನ್ ವಿಲಿಯಮ್ಸನ್ ಅವರ ಬ್ಯಾಟ್‌ನ ಹೊರ ಅಂಚಿಗೆ ಬಡಿದು ವಿಕೆಟ್​ ಕೀಪರ್​ನತ್ತ ಚಿಮ್ಮಿತ್ತು. ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯಲು ಯತ್ನಿಸಿದರೂ ಚೆಂಡು ಗ್ಲೌಸ್​ನಿಂದ ಜಾರಿತು.

ಚೆಂಡು ಸ್ಯಾಮ್ಸನ್​ ಕೈಯಿಂದ ಸ್ಲಿಪ್​ನತ್ತ ಚಿಮ್ಮುತ್ತಿದ್ದಂತೆ ಸ್ಲಿಪ್​ನಲ್ಲಿ ನಿಂತಿದ್ದ ದೇವದತ್ ಪಡಿಕ್ಕಲ್ ಮುಂದೆ ಡೈವ್ ಮಾಡಿ ಚೆಂಡನ್ನು ಹಿಡಿದರು. ಆದರೆ ಫೀಲ್ಡ್ ಅಂಪೈರ್‌ಗೆ ಕ್ಯಾಚ್ ಸರಿಯಾಗಿ ಹಿಡಿದಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸಂಪೂರ್ಣವಾಗಿ ಖಚಿತತೆ ಇರಲಿಲ್ಲ. ಹಾಗಾಗಿ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಲಾಯಿತು. ರಿಪ್ಲೇಗಳನ್ನು ಪರಿಶೀಲಿಸಿದ ಟಿವಿ ಅಂಪೈರ್ ವಿಲಿಯಮ್ಸನ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ರಿಪ್ಲೇ ವೇಳೆ ಚೆಂಡು ಪಡಿಕ್ಕಲ್ ಅವರ ಕೈಗೆ ಹೋಗುವ ಮೊದಲು ನೆಲಕ್ಕೆ ತಾಗಿರುವುದು ಕಂಡು ಬಂದಿದೆ. ಇದಾಗ್ಯೂ 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು.

ಎಸ್​ಆರ್​ಹೆಚ್ ತಂಡದ ಕೋಚ್ ಟಾಮ್ ಮೂಡಿ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಪಂದ್ಯದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂಡಿ, “ಕೇನ್ ಅವರನ್ನು ಔಟ್ ನೀಡಿರುವುದು ನಮಗೆ ತುಂಬಾ ಆಶ್ಚರ್ಯವಾಯಿತು. ವಿಶೇಷವಾಗಿ ನಾವು ರಿಪ್ಲೇಗಳನ್ನು ಪರಿಶೀಲಿಸಿ ಔಟ್ ಎಂದಿರುವುದೇ ಅಚ್ಚರಿ. ಏಕೆಂದರೆ ಚೆಂಡು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದಾಗ್ಯೂ ಔಟ್ ನೀಡಿರುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಟಾಮ್ ಮೂಡಿ ಹೇಳಿದ್ದರು. ಇದೀಗ ಈ ತೀರ್ಪಿನ ವಿರುದ್ದ ಎಸ್​ಆರ್​ಹೆಚ್​ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಗೆ ಅಧಿಕೃತ ದೂರು ಸಲ್ಲಿಸಿದೆ.

ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಸೌರಭ್ ದುಬೆ, ಸೀನ್ ಅಬಾಟ್, ಆರ್ ಸಮರ್ಥ್, ಜೆ ಸುಚಿತ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

Follow us on

Related Stories

Most Read Stories

Click on your DTH Provider to Add TV9 Kannada