IPL 2024: ಐಪಿಎಲ್ ಹರಾಜಿಗೂ ಮುನ್ನವೇ ಹೊರಬಿದ್ದ ಕೇದಾರ್ ಜಾಧವ್

| Updated By: ಝಾಹಿರ್ ಯೂಸುಫ್

Updated on: Dec 12, 2023 | 2:43 PM

IPL 2024 Auction: ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯಲಿದೆ. ದುಬೈನ ಕೋಕಾಕೋಲ ಅರೇನಾದಲ್ಲಿ ನಡೆಯಲಿರುವ ಈ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಮೂಲಕ 77 ಸ್ಲಾಟ್​ಗಳಿಗಾಗಿ ಹರಾಜು ನಡೆಯಲಿದೆ.

IPL 2024: ಐಪಿಎಲ್ ಹರಾಜಿಗೂ ಮುನ್ನವೇ ಹೊರಬಿದ್ದ ಕೇದಾರ್ ಜಾಧವ್
Kedar Jadhav
Follow us on

IPL 2024: ಐಪಿಎಲ್ ಸೀಸನ್ 17 ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾಧವ್ ಸ್ಥಾನ ಪಡೆದಿಲ್ಲ. ಅಂದರೆ ಈ ಬಾರಿಯ ಐಪಿಎಲ್ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪಟ್ಟಿಯಲ್ಲಿ ಕೇದರ್ ಜಾಧವ್ ಕೂಡ ಇದ್ದರು. ಆದರೀಗ ಹರಾಜಿಗಾಗಿ ಆಟಗಾರರನ್ನು ಶಾರ್ಟ್ ಲೀಸ್ಟ್​ ಮಾಡಲಾಗಿದ್ದು, ಈ ಮೂಲಕ 333 ಆಟಗಾರರಿಗೆ ಮಾತ್ರ ಹರಾಜಿನಲ್ಲಿ ಅವಕಾಶ ನೀಡಲಾಗುತ್ತಿದೆ.

ಇತ್ತ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗಾಗಿ ಹೆಸರು ನೀಡಿದ್ದ ಕೇದಾರ್ ಜಾಧವ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ಹೊಂದಿಲ್ಲ. ಇದೇ ಕಾರಣದಿಂದಾಗಿ ಅವರ ಹೆಸರನ್ನು ಫೈನಲ್ ಲೀಸ್ಟ್​ನಿಂದ ಹೊರಗಿಡಲಾಗಿದೆ.

ಕೇದಾರ್ ಜಾಧವ್ 2009 ರಿಂದ ಐಪಿಎಲ್ ಟೂರ್ನಿ ಆಡುತ್ತಿದ್ದಾರೆ. ಆರ್​ಸಿಬಿ ಪರ ಚೊಚ್ಚಲ ಬಾರಿ ಆಡಿದ್ದ ಜಾಧವ್ ಆ ಬಳಿಕ ಡೆಲ್ಲಿ ಡೇರ್​ ಡೆವಿಲ್ಸ್​ ತಂಡದ ಭಾಗವಾಗಿದ್ದರು. ಇನ್ನು 2011 ರಲ್ಲಿ ಕೊಚ್ಚಿ ಟಸ್ಕರ್ಸ್​ ತಂಡದ ಕಣಕ್ಕಿಳಿದಿದ್ದರು. ಇದಾದ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು.

2016 ಮತ್ತು 2017 ರಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಾಧವ್, 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದ್ದರು. ಮೂರು ವರ್ಷಗಳ ಕಾಲ ಸಿಎಸ್​ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್​ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ. ಐದು ತಂಡಗಳ ಪರ ಒಟ್ಟು 92 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಾಧವ್ ಕಲೆಹಾಕಿರುವುದು 1184 ರನ್ ಮಾತ್ರ.
ಹಾಗೆಯೇ ಕಳೆದ ನಾಲ್ಕು ಸೀಸನ್​ಗಳಲ್ಲಿ ಜಾಧವ್ ಒಟ್ಟು 28 ಪಂದ್ಯಗಳನ್ನಾಡಿದ್ದರು. ಇದರಲ್ಲಿ ಮೂಡಿ ಬಂದಿರುವುದು ಕೇವಲ 291 ರನ್ ಮಾತ್ರ. ಅಂದರೆ 297 ಎಸೆತಗಳನ್ನು ಎದುರಿಸಿ ಜಾಧವ್ ಕಲೆಹಾಕಿರುವುದು ಕೇವಲ 291 ರನ್​ ಮಾತ್ರ.

ಇಂತಹ ಕಳಪೆ ಪ್ರದರ್ಶನದ ಹೊರತಾಗಿಯೂ 2021 ರ ಹರಾಜಿನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಜಾಧವ್ ಅವರನ್ನು 2 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಎಸ್​ಆರ್​ಹೆಚ್​ ಪರ ಐದು ಇನಿಂಗ್ಸ್​ಗಳಿಂದ ಕಲೆಹಾಕಿದ್ದು 43 ರನ್​ ಮಾತ್ರ.

ಇದನ್ನೂ ಓದಿ: WPL 2024: RCB ಹೊಸ ತಂಡ ಹೀಗಿದೆ

ಇನ್ನು 2023 ರ ಐಪಿಎಲ್ ಆರ್​ಸಿಬಿ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಕೇದಾರ್ ಜಾಧವ್ 2 ಪಂದ್ಯಗಳಲ್ಲಿ ಒಟ್ಟು 12 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಇದಾಗ್ಯೂ ಈ ಬಾರಿಯ ಹರಾಜಿಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೀಗ ಹರಾಜಿಗೂ ಮುನ್ನವೇ 10 ಫ್ರಾಂಚೈಸಿಗಳು 38 ವರ್ಷ ಕೇದಾರ್ ಜಾಧವ್ ಅವರನ್ನು ಆಕ್ಷನ್ ಪಟ್ಟಿಯಿಂದ ಕೈಬಿಟ್ಟಿದೆ.