
ಐಪಿಎಲ್ 2025 (IPL 2025) ರ ಪ್ರಶಸ್ತಿ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸೀಸನ್‌ನಲ್ಲಿ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿದ್ದು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಈಗ ಎರಡೂ ತಂಡಗಳ ಆಟಗಾರರು ಫೈನಲ್‌ನಲ್ಲೂ ಅದ್ಭುತ ಪ್ರದರ್ಶನ ನೀಡುವುದನ್ನು ಕಾಣಬಹುದು. ಈ ಮೊದಲು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ, ಪಂದ್ಯಾವಳಿಯನ್ನು 10 ದಿನಗಳವರೆಗೆ ನಿಲ್ಲಿಸಲಾಯಿತು. ಈಗ ಈ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಫೈನಲ್‌ಗೂ ಮೊದಲು, ಅಹಮದಾಬಾದ್‌ನಲ್ಲಿ ಸಮಾರೋಪ ಸಮಾರಂಭವೂ (Closing Ceremony) ನಡೆಯಲಿದ್ದು, ಇದರಲ್ಲಿ ಅನೇಕ ಸೆಲೆಬ್ರೆಟಿಗಳು ಪ್ರದರ್ಶನ ನೀಡಲಿದ್ದಾರೆ.
ಈ ಬಾರಿಯ ಸಮಾರೋಪ ಸಮಾರಂಭವೂ ತುಂಬಾ ವಿಶೇಷವಾಗಿರಲಿದೆ. ಪ್ರಸಿದ್ಧ ಗಾಯಕ ಶಂಕರ್ ಮಹಾದೇವನ್ ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಅದ್ಭುತ ರೀತಿಯಲ್ಲಿ ಗೌರವ ಸಲ್ಲಿಸಲಿದ್ದಾರೆ. ಅವರ ಪ್ರದರ್ಶನವು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ವೀರ ಸೈನಿಕರನ್ನು ಗೌರವಿಸುತ್ತದೆ ಮತ್ತು ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಲಾಗುತ್ತದೆ. ಸಮಾರೋಪ ಸಮಾರಂಭವು ಭಾರತೀಯ ಕಾಲಮಾನ ಸಂಜೆ 6:00 ಗಂಟೆಗೆ ಆರಂಭವಾಗಲಿದೆ. ಇದರ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಇರುತ್ತದೆ.
IPL 2025: ಮಳೆಯಿಂದ ಐಪಿಎಲ್ ಫೈನಲ್ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಕಿರೀಟ?
ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ನಡುವೆ ಕಠಿಣ ಸ್ಪರ್ಧೆ ನಿರೀಕ್ಷಿಸಲಾಗಿದೆ. ಈ ಎರಡೂ ತಂಡಗಳ ನಡುವೆ ಇಲ್ಲಿಯವರೆಗೆ 36 ಐಪಿಎಲ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಪಂಜಾಬ್ ಕಿಂಗ್ಸ್ 18 ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ಪಂದ್ಯಗಳನ್ನು ಗೆದ್ದಿದೆ. ಕ್ವಾಲಿಫೈಯರ್-1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಜಯಗಳಿಸಿತು. ಇನ್ನು ಪಂಜಾಬ್ ಕಿಂಗ್ಸ್ ಬಗ್ಗೆ ಹೇಳುವುದಾದರೆ, ಶ್ರೇಯಸ್ ಪಡೆ, ಕ್ವಾಲಿಫೈಯರ್ -2 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಸೀಸನ್‌ನಲ್ಲಿ ಎರಡೂ ತಂಡಗಳ ನಡುವೆ ಮೂರು ಪಂದ್ಯಗಳು ನಡೆದಿದ್ದು, ಆರ್‌ಸಿಬಿ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಪಂಜಾಬ್ ಒಂದು ಪಂದ್ಯವನ್ನು ಗೆದ್ದಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಫೈನಲ್ ಪಂದ್ಯವು ತುಂಬಾ ರೋಮಾಂಚನಕಾರಿಯಾಗಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Mon, 2 June 25