IPL 2025: ಮಳೆಯಿಂದ ಐಪಿಎಲ್ ಫೈನಲ್ ರದ್ದಾದರೆ ಯಾವ ತಂಡಕ್ಕೆ ಚಾಂಪಿಯನ್ ಕಿರೀಟ?
IPL 2025 Final, RCB vs PBKS: ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ. ಮಳೆಯ ಸಾಧ್ಯತೆಯಿಂದಾಗಿ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಚಾಂಪಿಯನ್ ಆಗಲಿದೆ. ಹೆಚ್ಚುವರಿ ಸಮಯ ಮತ್ತು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಆದರೆ ಮಳೆ ಮುಂದುವರಿದರೆ, ಪಾಯಿಂಟ್ ಪಟ್ಟಿಯ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಗುತ್ತದೆ.

ಐಪಿಎಲ್ 2025 (IPL 2025) ರ ಫೈನಲ್ ಪಂದ್ಯವು ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (RCB vs PBKS) ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಮೊದಲ ಬಾರಿಗೆ ಚಾಂಪಿಯನ್ ಕಿರೀಟ ತೊಡುವ ಅವಕಾಶವಿರುವುದರಿಂದ ಈ ಬಾರಿಯ ಐಪಿಎಲ್ ಫೈನಲ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಆದಾಗ್ಯೂ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆಗಳಿವೆ. ಈಗ ಪ್ರಶ್ನೆ ಏನೆಂದರೆ, ಈ ಪಂದ್ಯ ಮಳೆಯಿಂದ ರದ್ದಾದರೆ ಐಪಿಎಲ್ 2025 ರ ವಿಜೇತರು ಯಾರು? ಪಂಜಾಬ್ ಮತ್ತು ಬೆಂಗಳೂರು ಐಪಿಎಲ್ ಟ್ರೋಫಿ ಹಂಚಿಕೊಳ್ಳುತ್ತವೆಯೇ? ಪಂದ್ಯಾವಳಿಯ ನಿಯಮಗಳೇನು ಎಂಬುದನ್ನು ನೋಡುವುದಾದರೆ..
ಮಳೆಯಿಂದಾಗಿ ಫೈನಲ್ ರದ್ದಾದರೆ?
ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯಕ್ಕೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಅಂದರೆ ಈ ಫೈನಲ್ ಪಂದ್ಯಕ್ಕೆ ಹೆಚ್ಚುವರಿಯಾಗಿ 2 ಗಂಟೆಗಳನ್ನು ನಿಗದಿಪಡಿಸಲಾಗಿದೆ. ಆದರೆ ಈ ಹೆಚ್ಚುವರಿ ಸಮಯದಲ್ಲೂ ಪಂದ್ಯವನ್ನು ನಡೆಸಲಾಗದೆ ಮಳೆಯಿಂದಾಗಿ ರದ್ದಾದರೆ, ಜೂನ್ 4 ಅನ್ನು ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಮೀಸಲು ದಿನದಂದು ಸಹ ಮಳೆ ಬಂದು ಈ ಪಂದ್ಯವನ್ನು ನಡೆಸಲಾಗದಿದ್ದರೆ, ಲೀಗ್ ಹಂತದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದರರ್ಥ ಮೀಸಲು ದಿನದಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಪಂಜಾಬ್ ಕಿಂಗ್ಸ್ ಐಪಿಎಲ್ 2025 ರ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ.
ಪಾಯಿಂಟ್ ಪಟ್ಟಿಯಲ್ಲಿ ಪಂಜಾಬ್ಗೆ ಅಗ್ರಸ್ಥಾನ
ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ 9 ಪಂದ್ಯಗಳಲ್ಲಿ ಜಯಗಳಿಸಿತ್ತು. ಪಂಜಾಬ್ ನಾಲ್ಕು ಪಂದ್ಯಗಳಲ್ಲಿ ಸೋತಿದ್ದರೆ, ಒಂದು ಪಂದ್ಯ ಫಲಿತಾಂಶ ಕಂಡಿರಲಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ 19 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತು. ಆರ್‌ಸಿಬಿ ಬಗ್ಗೆ ಹೇಳುವುದಾದರೆ, ಆಡಿದ 14 ಪಂದ್ಯಗಳಲ್ಲಿ 19 ಅಂಕಗಳನ್ನು ಹೊಂದಿದೆಯಾದರೂ ತಂಡದ ನೆಟ್ ರನ್ ರೇಟ್ ಪಂಜಾಬ್ ಕಿಂಗ್ಸ್‌ಗಿಂತ ಕಡಿಮೆ ಇದೆ. ಸದ್ಯಕ್ಕೆ, ಆರ್‌ಸಿಬಿ ಅಭಿಮಾನಿಗಳು ಈ ಪಂದ್ಯದಲ್ಲಿ ಮಳೆ ಬರಬಾರದು ಮತ್ತು ಪಂದ್ಯ ಕೊನೆಯವರೆಗೂ ನಡೆಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದಾಗ್ಯೂ, ವರದಿಯ ಪ್ರಕಾರ, ಜೂನ್ 3 ರಂದು ಸಂಜೆ ಹಗುರ ಮಳೆಯಾಗುವ ಸಾಧ್ಯತೆಯಿದೆ.
IPL 2025: ಐಪಿಎಲ್ ಫೈನಲ್ಗೇರಿದ ಆರ್ಸಿಬಿಯ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಅಹಮದಾಬಾದ್‌ನಲ್ಲಿ ಮಳೆ ಬಂದರೆ…
ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯದ ಸಮಯದಲ್ಲಿ ಮಳೆ ಬಂದರೂ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಈ ಮೈದಾನದ ಸೌಲಭ್ಯಗಳು ತುಂಬಾ ಚೆನ್ನಾಗಿವೆ. ಇಲ್ಲಿನ ಒಳಚರಂಡಿ ವ್ಯವಸ್ಥೆ ಅದ್ಭುತವಾಗಿದೆ. ಮಳೆ ನಿಂತ 20 ನಿಮಿಷಗಳ ನಂತರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಸುಲಭವಾಗಿ ಆರಂಭವಾಗಬಹುದು. ಮುಂಬೈ ಹಾಗೂ ಪಂಜಾಬ್ ನಡುವಿನ ಕ್ವಾಲಿಫೈಯರ್ 2 ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತು. ಆಟ ಸಾಕಷ್ಟು ತಡವಾಗಿ ಆರಂಭವಾಯಿತು. ಧಾರಕಾರವಾಗಿ ಮಳೆ ಸುರಿದರೂ ಕೆಲವೇ ನಿಮಿಷಗಳಲ್ಲಿ ಆಟವನ್ನು ಆರಂಭಿಸಲಾಗಿತ್ತು. ಹೀಗಾಗಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಅಭಿಮಾನಿಗಳು ಹೆಚ್ಚು ಆತಂಕಪಡುವ ಅವಶ್ಯಕತೆ ಇಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
