IPL 2025: ಐಪಿಎಲ್ ಆರಂಭಕ್ಕೂ ಮುನ್ನವೇ ಹೈವೋಲ್ಟೇಜ್ ಪಂದ್ಯ ಬೇರೆಡೆಗೆ ಶಿಫ್ಟ್..! ಕಾರಣವೇನು?
IPL 2025: ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ನಡುವಿನ ಪಂದ್ಯವು ರಾಮನವಮಿ ದಿನದಂದು ನಡೆಯುವ ಕಾರಣ, ಪಂದ್ಯದ ದಿನಾಂಕ ಅಥವಾ ಸ್ಥಳವನ್ನು ಬದಲಾಯಿಸುವಂತೆ ಬಿಸಿಸಿಐ ಬಳಿ ಬಂಗಾಳ ಕ್ರಿಕೆಟ್ ಸಂಸ್ಥೆ ಮನವಿ ಮಾಡಿದೆ. ಬಿಸಿಸಿಐ ಎರಡೂ ತಂಡಗಳೊಂದಿಗೆ ಚರ್ಚಿಸುತ್ತಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ.

18ನೇ ಆವೃತ್ತಿಯ ಐಪಿಎಲ್ (IPL 2025) ಇದೇ ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಆದರೆ ಈ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಈ ಟೂರ್ನಿಯ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುವ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಬೇಕಾದ ಸಂಕಷ್ಟ ಬಿಸಿಸಿಐಗೆ ಎದುರಾಗಿದೆ. ವಾಸ್ತವವಾಗಿ ಏಪ್ರಿಲ್ 6 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಕೊಲ್ಕತ್ತಾದಲ್ಲಿ ನಡೆಯಲಿದೆ. ಈ ಪಂದ್ಯ ರಾಮ ನವಮಿಯಂದು ನಡೆಯುತ್ತಿದೆ. ಆದ್ದರಿಂದ ಭದ್ರತಾ ದೃಷ್ಟಿಯಿಂದ, ಬಂಗಾಳ ಕ್ರಿಕೆಟ್ ಸಂಸ್ಥೆಯು ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ ಎಂದು ವರದಿಯಾಗದೆ.
ಭದ್ರತೆ ಒದಗಿಸಲು ಸಾಧ್ಯವಿಲ್ಲ
ಕೋಲ್ಕತ್ತಾ ಪೊಲೀಸರು ಮತ್ತು ಸ್ಥಳೀಯ ಆಡಳಿತ ಹೊರಡಿಸಿದ ಅಧಿಸೂಚನೆಯ ನಂತರ ಬಂಗಾಳ ಕ್ರಿಕೆಟ್ ಮಂಡಳಿ, ಈ ಪಂದ್ಯವನ್ನು ಬೇರೆಡೆಗೆ ಅಥವಾ ಬೇರೆ ದಿನಾಂಕದಂದು ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಿರುವುದಾಗಿ ಮಾಹಿತಿ ನೀಡಿದೆ. ರಾಮ ನವಮಿ ಆಚರಣೆಯ ಕಾರಣ ಪಂದ್ಯಗಳಿಗೆ ಸರಿಯಾದ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಆಡಳಿತ ಸ್ಪಷ್ಟಪಡಿಸಿದೆ. ವರದಿಯ ಪ್ರಕಾರ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ, ‘ನಾವು ಸ್ಥಳೀಯ ಆಡಳಿತ ಮತ್ತು ಪೊಲೀಸರೊಂದಿಗೆ ಚರ್ಚಿಸಿದ್ದು, ಪಂದ್ಯದ ದಿನದಂದೆ ರಾಮನವಮಿ ಇರುವ ಕಾರಣ ಸಾಕಷ್ಟು ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಾಯಿಸುವಂತೆ ನಾವು ಬಿಸಿಸಿಐಗೆ ವಿನಂತಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.
ಈಗಾಗಲೇ ಈ ಟೂರ್ನಿಯ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಪಂದ್ಯದ ಸಮಯವನ್ನು ಬದಲಾಯಿಸುವುದು ತುಂಬಾ ಕಷ್ಟ. ಆದ್ದರಿಂದ, ಈ ಪಂದ್ಯವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆ ಇದೆ. ‘ನಮಗೆ ಬಂಗಾಳ ಕ್ರಿಕೆಟ್ ಸಂಸ್ಥೆಯಿಂದ ಅಧಿಸೂಚನೆ ಬಂದಿದೆ. ನಾವು ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸುತ್ತಿದ್ದೇವೆ. ಬಿಸಿಸಿಐ ಈಗಾಗಲೇ ಈ ಎರಡು ತಂಡಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
IPL 2025: ಆರ್ಸಿಬಿ ತವರು ಪಂದ್ಯಗಳ ಟಿಕೆಟ್ ಮಾರಾಟ ಆರಂಭ; ಕನಿಷ್ಠ, ಗರಿಷ್ಠ ಬೆಲೆ ಎಷ್ಟು ಗೊತ್ತಾ?
ಪರ್ಯಾಯ ದಿನಾಂಕ
ಕಳೆದ ವರ್ಷವೂ ಕೋಲ್ಕತ್ತಾ ಪಂದ್ಯವು ರಾಮ ನವಮಿಯ ದಿನದಂದು ಬಂದಿತ್ತು. ಆಗಲೂ ಪಂದ್ಯದ ಸಮಯವನ್ನು ಬದಲಾಯಿಸಬೇಕಾಯಿತು. ಇದೀಗ ಈ ಬಾರಿಯೂ ಆ ಸಮಸ್ಯೆ ಎದುರಾಗಿದೆ. ಹೀಗಾಗಿ ನಾವು ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ. ಎರಡೂ ತಂಡಗಳ ಪಂದ್ಯಗಳ ನಡುವೆ ಒಂದು ವಾರದ ಅಂತರವಿದ್ದು, ಆದ್ದರಿಂದ ಪರ್ಯಾಯ ದಿನಾಂಕವನ್ನು ನಿಗದಿಪಡಿಸಲು ಚರ್ಚಿಸಲಾಗುತ್ತಿದೆ. ಏಪ್ರಿಲ್ 11 ರಂದು ಕೋಲ್ಕತ್ತಾ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದರೆ, ಏಪ್ರಿಲ್ 12 ರಂದು ಲಕ್ನೋ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಹಾಗಾಗಿ ಸ್ಥಳ ಅಥವಾ ಸಮಯ ಬದಲಾಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 19 March 25