
ಪಂಜಾಬ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 (IPL 2025) ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ (MI vs GT) ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಐದು ಬಾರಿಯ ಚಾಂಪಿಯನ್ಸ್ ಮುಂಬೈ 21 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆದುಕೊಂಡಿದೆ. ಇದೀಗ ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 229 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ಗೆ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ರೋಹಿತ್ ಶರ್ಮಾ ಮತ್ತು ಜಾನಿ ಬೈರ್‌ಸ್ಟೋವ್ ಅವರ ಆರಂಭಿಕ ಜೋಡಿ ಉತ್ತಮ ಆರಂಭ ನೀಡಿತು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 84 ರನ್‌ಗಳ ಪಾಲುದಾರಿಕೆ ಇತ್ತು. ಬೈರ್‌ಸ್ಟೋವ್ 22 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 47 ರನ್ ಗಳಿಸಿ ಔಟಾದರು. ಇದರ ನಂತರ ರೋಹಿತ್, ಸೂರ್ಯಕುಮಾರ್ ಯಾದವ್ ಅವರ ಜೊತೆಗೂಡಿ 34 ಎಸೆತಗಳಲ್ಲಿ 59 ರನ್ ಸೇರಿಸಿದರು. ಈ ಸಮಯದಲ್ಲಿ, ಸೂರ್ಯಕುಮಾರ್ 20 ಎಸೆತಗಳನ್ನು ಎದುರಿಸಿ 33 ರನ್ಗಳಿಗೆ ಪೆವಿಲಿಯನ್‌ಗೆ ಮರಳಿದರು.
ಆದಾಗ್ಯೂ ಆರಂಭದಲ್ಲಿ ಸಿಕ್ಕ 2 ಜೀವದಾನಗಳನ್ನು ಸದುಪಯೋಗಪಡಿಸಿಕೊಂಡ ರೋಹಿತ್ ಶರ್ಮಾ 28 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಅಲ್ಲದೆ ತಿಲಕ್ ವರ್ಮಾ ಜೊತೆ ಮೂರನೇ ವಿಕೆಟ್‌ಗೆ ಹಿಟ್‌ಮ್ಯಾನ್ 22 ಎಸೆತಗಳಲ್ಲಿ 43 ರನ್ ಸೇರಿಸಿದರು. ಅಂತಿಮವಾಗಿ ರೋಹಿತ್ 50 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 81 ರನ್ ಗಳಿಸುವಲ್ಲಿ ಯಶಸ್ವಿಯಾದರು. ತಿಲಕ್ 11 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರೆ, ನಮನ್ ಧೀರ್ 9 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಾಯದಿಂದ 22 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆಘಾತಕಾರಿ ಆರಂಭ ಸಿಕ್ಕಿತು. ನಾಯಕ ಶುಭಮನ್ ಗಿಲ್ ಕೇವಲ ಒಂದು ರನ್ ಗಳಿಸಿ ಔಟಾದರು. ಇದಾದ ನಂತರ, ಕ್ರೀಸ್‌ಗೆ ಬಂದ ಕುಸಲ್ ಮೆಂಡಿಸ್ ಹಿಟ್ ವಿಕೆಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಅವರು ಸಾಯಿ ಸುದರ್ಶನ್ ಅವರೊಂದಿಗೆ 34 ಎಸೆತಗಳಲ್ಲಿ 64 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರಲ್ಲಿ ಮೆಂಡಿಸ್ 20 ರನ್‌ಗಳ ಕೊಡುಗೆ ನೀಡಿದರು. ಆ ನಂತರ ಜೊತೆಯಾದ ಸುದರ್ಶನ್, ವಾಷಿಂಗ್ಟನ್ ಸುಂದರ್ ಜೊತೆಗೂಡಿ 44 ಎಸೆತಗಳಲ್ಲಿ 84 ರನ್‌ಗಳ ಪಾಲುದಾರಿಕೆ ನಿರ್ಮಿಸಿದರು. ಸುಂದರ್ 48 ಮತ್ತು ಸುದರ್ಶನ್ 80 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
IPL 2025: ಮೊದಲ ಓವರ್ನಲ್ಲೇ ಗಂಟು ಮೂಟೆ ಕಟ್ಟಿದ ಗಿಲ್; ವಿಡಿಯೋ ನೋಡಿ
ಈ ಇಬ್ಬರ ವಿಕೆಟ್ ಪತನದ ಬಳಿಕ ಗುಜರಾತ್ ಗೆಲುವಿನ ಕನಸು ಭಗ್ನವಾಯಿತು. ಕೊನೆಯಲ್ಲಿ ರುದರ್ಫೋರ್ಡ್ 24 ರನ್ ಗಳಿಸಿದರೆ, ಶಾರುಖ್ ಖಾನ್ 13 ರನ್ ಗಳಿಸಿದರು. ರಾಹುಲ್ ತೆವಾಟಿಯಾ 16 ರನ್ ಗಳಿಸಿ ಅಜೇಯರಾಗಿ ಉಳಿದರೆ, ರಶೀದ್ ಖಾನ್ ಖಾತೆ ತೆರೆಯಲಿಲ್ಲ. ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೋಲ್ಟ್ ಎರಡು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ರಿಚರ್ಡ್ ಗ್ಲೀಸನ್, ಮಿಚೆಲ್ ಸ್ಯಾಂಟ್ನರ್ ಮತ್ತು ಅಶ್ವಿನಿ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 pm, Fri, 30 May 25