PBKS vs CSK: ಸೋಲಿಗೆ ಕಾರಣ ಬ್ಯಾಟರ್, ಬೌಲರ್ ಅಲ್ಲ: ರುತುರಾಜ್ ಗಾಯಕ್ವಾಡ್
IPL 2025 PBKS vs CSK: ಐಪಿಎಲ್ನ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಗ್ಗರಿಸಿದೆ. ಚಂಡೀಗಢ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 219 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 201 ರನ್ಗಳಿಸಲಷ್ಟೇ ಶಕ್ತರಾದರು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು 201 ರನ್‌ಗಳು ಮಾತ್ರ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 18 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ತಂಡದ ಪ್ರದರ್ಶನಕ್ಕೆ ನಿರಾಶೆ ವ್ಯಕ್ತಪಡಿಸಿದರು. ಕಳೆದ ನಾಲ್ಕು ಪಂದ್ಯಗಳಲ್ಲಿ ನಾವು ಸೋತಿದ್ದೇವೆ. ಈ ಸೋಲುಗಳಿಗೆ ನನ್ನ ಪ್ರಕಾರ, ಬ್ಯಾಟ್ಸ್‌ಮನ್ ಅಥವಾ ಬೌಲರ್ ಕಾರಣ ಅಲ್ಲ . ಬದಲಾಗಿ ಫೀಲ್ಡಿಂಗ್ನಲ್ಲಿದ್ದ ತಪ್ಪುಗಳಿಂದಲೇ ನಾವು ಸೋಲುತ್ತಿದ್ದೇವೆ ಎಂದರು.
ನಾವು ಫೀಲ್ಡಿಂಗ್ನಲ್ಲಿ ಬಿಡುತ್ತಿರುವ ಕ್ಯಾಚ್ಗಳು ಹಾಗೂ ಮಿಸ್ ಫೀಲ್ಡಿಂಗ್ಗಳಿಂದ ಸ್ಕೋರ್ಗಳಲ್ಲಿ ವ್ಯತ್ಯಾಸಗಳು ಉಂಟಾಗುತ್ತಿದೆ ಎಂಬುದು ನನ್ನ ಭಾವನೆ. ಇದರಿಂದ ಬ್ಯಾಟ್ಸ್ಮನ್ಗಳು 15, 20, 30 ರನ್‌ಗಳನ್ನು ಗಳಿಸುತ್ತಿದ್ದಾರೆ. ಈ ರನ್ಗಳ ಅಂತರದಿಂದಲೇ ನಾವು ಪಂದ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ತುಂಬಾ ಚೆನ್ನಾಗಿ ಬ್ಯಾಟಿಂಗ್ ಸಹ ಮಾಡಿದ್ದರು. ನಾವು ನಿಯಮಿತವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದೆವು. ಆದರೆ ಅವರು ರನ್ ವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. 10-15 ರನ್‌ಗಳು ಕಡಿಮೆ ಇದ್ದಿದ್ದರೆ ನಾವು ಪಂದ್ಯವನ್ನು ಗೆಲ್ಲುತ್ತಿದ್ದೆವು. ಆದರೆ ಕ್ಯಾಚ್‌ಗಳನ್ನು ಕೈಬಿಟ್ಟ ಪರಿಣಾಮ ಅವರು ಹೆಚ್ಚುವರಿ ರನ್ಗಳಿಸಲು ಸಾಧ್ಯವಾಯಿತು ಎಂದು ರುತುರಾಜ್ ಹೇಳಿದ್ದಾರೆ.
ಸಿಎಸ್ಕೆ ಪರ ರಚಿನ್ ರವೀಂದ್ರ ಹಾಗೂ ಡೆವೊನ್ ಕಾನ್ವೆ ಪವರ್ಪ್ಲೇನಲ್ಲಿ ಉತ್ತಮವಾಗಿಯೇ ಆಡಿದ್ದಾರೆ. ಇದು ನಮ್ಮ ಬ್ಯಾಟಿಂಗ್ ವಿಭಾಗದಲ್ಲಿನ ಸಕಾರಾತ್ಮಕ ಅಂಶಗಳು. ಇದಾಗ್ಯೂ ನಾವು ಗೆಲುವಿಗಾಗಿ ಕೇವಲ ಎರಡು ಮೂರು ಬಿಗ್ ಹಿಟ್ಗಳ ಅಂತರದಲ್ಲಿದ್ದೆವು. ಒಂದು ವೇಳೆ ಫೀಲ್ಡಿಂಗ್ನಲ್ಲಿ ತಪ್ಪುಗಳನ್ನು ಮಾಡದಿದ್ದರೆ ಫಲಿತಾಂಶವು ನಮ್ಮ ಪರವಾಗುತ್ತಿತ್ತು.
ಇದನ್ನೂ ಓದಿ: IPL 2025: ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ
ಪಂದ್ಯದ ಆರಂಭಕ್ಕೂ ಮುನ್ನವೇ ನಾವು ಫೀಲ್ಡಿಂಗ್ ಬಗ್ಗೆ ಮಾತನಾಡಿದ್ದೆವು. ನರ್ವಸ್ ಆಗಿದ್ದರೆ, ನೀವು ಕ್ಯಾಚ್ ಅನ್ನು ಬಿಡುತ್ತೀರಿ ಎಂದು ಸಹ ಎಚ್ಚರಿಸಿದ್ದೆವು. ಅತ್ಯುತ್ತಮ ಫೀಲ್ಡಿಂಗ್ನಿಂದ ಸಹ ಪಂದ್ಯದ ಗತಿ ಬದಲಿಸಬಹುದು. ಆದರೆ ನಮ್ಮ ಪಾಲಿಗೆ ಇಂದು ಕೆಟ್ಟ ದಿನವಾಗಿತ್ತು ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸತತ ನಾಲ್ಕನೇ ಸೋಲಿಗೆ ಫೀಲ್ಡಿಂಗ್ ಕಾರಣ ಎಂದು ಸಿಎಸ್ಕೆ ನಾಯಕ ದೂರಿದ್ದಾರೆ.
Published On - 6:56 am, Wed, 9 April 25