IPL 2025: ನಮ್ಗೆ ಮೈದಾನ ಮ್ಯಾಟರೇ ಅಲ್ಲ: ಗೆದ್ದ ಬಳಿಕ ರಜತ್ ಪಾಟಿದಾರ್ ಹೇಳಿಕೆ

IPL 2025 DC vs RCB: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 46ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18.3 ಓವರ್​ಗಳಲ್ಲಿ ಗುರಿ ತಲುಪಿ 6 ವಿಕೆಟ್​ಗಳ ಜಯ ಸಾಧಿಸಿದೆ.

IPL 2025: ನಮ್ಗೆ ಮೈದಾನ ಮ್ಯಾಟರೇ ಅಲ್ಲ: ಗೆದ್ದ ಬಳಿಕ ರಜತ್ ಪಾಟಿದಾರ್ ಹೇಳಿಕೆ
Rajat Patidar

Updated on: Apr 28, 2025 | 7:53 AM

IPL 2025: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

163 ರನ್​ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ (51) ಹಾಗೂ ಕೃನಾಲ್ ಪಾಂಡ್ಯ (73) ಆಕರ್ಷಕ ಅರ್ಧಶತಕ ಬಾರಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್​ಸಿಬಿ ತಂಡವು 18.3 ಓವರ್​ಗಳಲ್ಲಿ 165 ರನ್ ಬಾರಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಪ್ರದರ್ಶನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ನಾನು ಮೊದಲೇ ಹೇಳಿದಂತೆ, ನಾವು ಮೈದಾನಗಳನ್ನು ನೋಡುವುದಿಲ್ಲ. ಬದಲಾಗಿ ಉತ್ತಮ ಕ್ರಿಕೆಟ್ ಆಡಲು ಬಯಸುತ್ತಿದ್ದೇವೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಚೇಸಿಂಗ್ ವಿಕೆಟ್, ಬೌಲಿಂಗ್ ಮತ್ತು ಸ್ಕೋರ್ ಬಗ್ಗೆ ಸಾಕಷ್ಟು ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಗೆಲುವು ಸಾಧಿಸಿದ್ದೇವೆ ಎಂದರು.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೀಡಿದ ಗುರಿ ನೋಡಿದಾಗಲೇ, ಇದನ್ನು ಚೇಸ್ ಮಾಡಬಹುದೆಂದು ತಿಳಿದಿತ್ತು. ಏಕೆಂದರೆ ನನ್ನ ಬೌಲರ್​ಗಳು ಎದುರಾಳಿ ಬ್ಯಾಟರ್​ಗಳನ್ನು ಕಡಿಮೆ ಸ್ಕೋರ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಬೌಲರ್​ಗಳಿಗೆ ಸಲ್ಲಬೇಕು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಆರ್​ಸಿಬಿ ತಂಡದ ನಾಯಕನಾಗಿ ಯಶಸ್ಸು ಸಾಧಿಸುತ್ತಿರುವ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಅವರನ್ನು ಮುನ್ನಡೆಸಿದಾಗ ಅದ್ಭುತವೆನಿಸುತ್ತದೆ. ಇದು ನನ್ನ ಕಲಿಕೆಯ ಸಮಯ. ಇದರೊಂದಿಗೆ ಜಯವನ್ನು ಅಸ್ವಾದಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: VIDEO: ಇದು ನನ್ನ ಗ್ರೌಂಡ್… ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು

ಸದ್ಯ 10 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಜಯ ಹಾಗೂ 3 ಸೋಲುಗಳೊಂದಿಗೆ ಒಟ್ಟು 14 ಅಂಕಗಳನ್ನು ಕಲೆಹಾಕಿದೆ. ಇನ್ನುಳಿದ 4 ಮ್ಯಾಚ್​ಗಳಲ್ಲಿ ಆರ್​​​ಸಿಬಿ ಒಂದೇ ಒಂದು ಗೆಲುವು ದಾಖಲಿಸಿದರೆ ಪ್ಲೇಆಫ್ ಹಂತಕ್ಕೇರಬಹುದು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಈ ಬಾರಿ ಪ್ಲೇಆಫ್ಸ್​ನಲ್ಲಿ ಎದುರು ನೋಡಬಹುದು.

 

Published On - 7:53 am, Mon, 28 April 25