IPL 2025: RCB ಆಟಗಾರನ ದೊಡ್ಡ ಎಡವಟ್ಟು: ಸೋಲಿನಿಂದ ಜಸ್ಟ್ ಪಾರು
IPL 2025 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 42ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 205 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 194 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 42ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೇವಲ 11 ರನ್ಗಳ ಜಯ ಸಾಧಿಸಿದೆ. ಅದು ಕೂಡ ಕೊನೆಯ ಓವರ್ ಮೂಲಕ ಎಂಬುದು ವಿಶೇಷ. ಅದರಲ್ಲೂ ಕೊನೆಯ 2 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು ಕೇವಲ 18 ರನ್ಗಳ ಅವಶ್ಯಕತೆಯಿತ್ತು. ಇದರ ನಡುವೆ ಆರ್ಸಿಬಿ ಆಟಗಾರನ ಮಾಡಿದ ತಪ್ಪಿನಿಂದಾಗಿ ಈ ಗುರಿಯು 13 ಕ್ಕೆ ಬರುತ್ತಿತ್ತು ಎಂದರೆ ನಂಬಲೇಬೇಕು.
9ನೇ ಓವರ್ನ ಕೊನೆಯ ಎಸೆತದಲ್ಲಿ ನಿತೀಶ್ ರಾಣಾ ಕವರ್ಸ್ನತ್ತ ಬಾರಿಸಿದ್ದರು. ಈ ವೇಳೆ ರಿಯಾನ್ ಪರಾಗ್ ಓಡಲು ಮುಂದಾದರೂ, ರಾಣಾ ರನ್ ನಿರಾಕರಿಸಿದರು. ಅತ್ತ ಕಡೆಯಿಂದ ಫೀಲ್ಡರ್ ಚೆಂಡನ್ನು ವಿಕೆಟ್ ಕೀಪರ್ನತ್ತ ಎಸೆದಿದ್ದಾರೆ. ಆದರೆ ಚೆಂಡು ಹಿಡಿಯುವಲ್ಲಿ ಜಿತೇಶ್ ಶರ್ಮಾ ವಿಫಲರಾದರು. ಈ ವೇಳೆ ವಿಕೆಟ್ ಕೀಪರ್ ಹಿಂದೆ ಇದ್ದ ಸುಯಶ್ ಸರ್ಮಾ ತನ್ನ ಕ್ಯಾಪ್ನಿಂದ ಚೆಂಡನ್ನು ಹಿಡಿದಿದ್ದಾರೆ.
10ನೇ ಓವರ್ ಆರಂಭಕ್ಕೂ ಮುನ್ನ ಅಂಪೈರ್ ಫೀಲ್ಡರ್ ಕ್ಯಾಪ್ನಲ್ಲಿ ಚೆಂಡನ್ನು ಹಿಡಿದಿರುವುದನ್ನು ಮರು ಪರಿಶೀಲಿಸಿದ್ದಾರೆ. ಈ ವಿಡಿಯೋ ಪರಿಶೀಲನೆ ವೇಳೆ ನಾನ್ ಸ್ಟ್ರೈಕ್ನಲ್ಲಿದ್ದ ಅಂಪೈರ್ ಓವರ್ ಮುಗಿದಿರುವುದನ್ನು ಘೋಷಿಸಿರುವುದು ಕಂಡು ಬಂದಿದೆ. ಇಲ್ಲದಿದ್ದರೆ ಆರ್ಸಿಬಿ ತಂಡಕ್ಕೆ 5 ರನ್ಗಳ ಪೆನಾಲ್ಟಿ ವಿಧಿಸಲಾಗುತ್ತಿತ್ತು.
ಸುಯಶ್ ಶರ್ಮಾ ಮಾಡಿದ ತಪ್ಪಿನ ಬಗ್ಗೆ ಕಾಮೆಂಟೇಟರ್ಗಳ ಚರ್ಚೆ:
View this post on Instagram
ಐಪಿಎಲ್ ನಿಯಮದ ಪ್ರಕಾರ, ಒಬ್ಬ ಫೀಲ್ಡರ್ ತನ್ನ ದೇಹದ ಯಾವುದೇ ಭಾಗದಿಂದ ಚೆಂಡನ್ನು ಫೀಲ್ಡಿಂಗ್ ಮಾಡಬಹುದು. ಆದಾಗ್ಯೂ, ಚೆಂಡು ಆಟದಲ್ಲಿರುವಾಗ, ಅದನ್ನು ಬೇರೆ ವಸ್ತುಗಳಿಂದ ತಡೆದರೆ ಅಥವಾ ಫೀಲ್ಡಿಂಗ್ ಮಾಡಿದ್ದರೆ ಅದನ್ನು ಕಾನೂನುಬಾಹಿರ ಫೀಲ್ಡಿಂಗ್ ಪರಿಗಣಿಸಲಾಗುತ್ತದೆ.
ಇಲ್ಲಿ ಸುಯಶ್ ಶರ್ಮಾ ಕ್ಯಾಪ್ನಲ್ಲಿ ಚೆಂಡನ್ನು ತಡೆದಿರುವುದು ಕಾನೂನುಬಾಹಿರವಾಗಿತ್ತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 5 ರನ್ಗಳನ್ನು ನೀಡಬೇಕಿತ್ತು. ಆದರೆ ಸುಯಶ್ ಚೆಂಡನ್ನು ತಡೆಯುವ ಮುನ್ನವೇ ಅಂಪೈರ್ ಓವರ್ ಮುಗಿದಿದೆ ಎಂದು ಸೂಚನೆ ನೀಡಿದ್ದರು. ಹೀಗಾಗಿ ಚೆಂಡು ಡೆಡ್ ಆಗಿದೆ ಎಂದು ಪರಿಗಣಿಸಲಾಗಿದೆ.
ಒಂದು ವೇಳೆ ಅಂಪೈರ್ ಓವರ್ ಮುಗಿದಿದೆ ಎನ್ನುವ ಮೊದಲೇ, ಸುಯಶ್ ಶರ್ಮಾ ಕ್ಯಾಪ್ಗೆ ಚೆಂಡು ತಾಗಿದ್ದರೆ 5 ರನ್ಗಳ ಪೆನಾಲ್ಟಿ ವಿಧಿಸಲಾಗುತ್ತಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೆಚ್ಚುವರಿ 5 ರನ್ಗಳು ಲಭಿಸುತ್ತಿತ್ತು. ಆದರೆ ಚೆಂಡನ್ನು ಗಮನಿಸದೇ ಅಂಪೈರ್ ಓವರ್ ಮುಕ್ತಾಯ ಎಂದಿರುವುದು ಆರ್ಸಿಬಿ ಪಾಲಿಗೆ ವರವಾಗಿ ಪರಿಣಮಿಸಿತು.
ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?
ಒಂದು ವೇಳೆ ಈ 5 ರನ್ ಲಭಿಸಿದ್ದರೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೊನೆಯ 2 ಓವರ್ಗಳಲ್ಲಿ ಗೆಲ್ಲಲು ಕೇವಲ 13 ರನ್ಗಳ ಅವಶ್ಯಕತೆ ಮಾತ್ರ ಇರುತ್ತಿತ್ತು. ಈ ಮೂಲಕ ಆರ್ಆರ್ ತಂಡಕ್ಕೆ ಸುಲಭವಾಗಿ ಗೆಲ್ಲುವ ಅವಕಾಶವಿರುತ್ತಿತ್ತು. ಆದರೆ ಅದೃಷ್ಟ ಆರ್ಸಿಬಿ ಪರವಿದ್ದ ಕಾರಣ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ರನ್ಗಳ ರೋಚಕ ಜಯ ಸಾಧಿಸಿದೆ.




