IPL 2025: 10 ವರ್ಷಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲದ RCB
IPL 2025 MI vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು 33 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 19 ಬಾರಿ ಗೆಲುವು ದಾಖಲಿಸಿದೆ. ಇನ್ನು ಆರ್‌ಸಿಬಿ ತಂಡ ಮುಂಬೈ ವಿರುದ್ಧ ಗೆದ್ದಿರುವುದು ಕೇವಲ 14 ಪಂದ್ಯಗಳಲ್ಲಿ ಮಾತ್ರ.

IPL 2025: ಐಪಿಎಲ್ ಸೀಸನ್-18ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಈ ಬಾರಿ ಆರ್‌ಸಿಬಿ ಹೊಸ ಹುಮ್ಮಸ್ಸಿನಲ್ಲಿದೆ. ಅದರಲ್ಲೂ ಚೆಪಾಕ್ ಸ್ಟೇಡಿಯಂನಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 17 ವರ್ಷಗಳ ಬಳಿಕ ಮಣ್ಣು ಮುಕ್ಕಿಸಿರುವ ಆರ್‌ಸಿಬಿ ಇದೀಗ ಮುಂಬೈನಲ್ಲೂ ವಿಜಯ ಪತಾಕೆ ಹಾರಿಸುವ ವಿಶ್ವಾಸದಲ್ಲಿದೆ.
10 ವರ್ಷಗಳಿಂದ ಗೆಲ್ಲದ RCB:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ಗೆದ್ದು 10 ವರ್ಷಗಳೇ ಕಳೆದಿವೆ. ಕೊನೆಯ ಬಾರಿ 2015 ರಲ್ಲಿ ಜಯ ಸಾಧಿಸಿತ್ತು. ಇದಾದ ಬಳಿಕ ಒಮ್ಮೆಯೂ ತವರಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ.
ಇದರ ನಡುವೆ ವಾಂಖೆಡೆ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ 6 ಬಾರಿ ಮುಖಾಮುಖಿಯಾಗಿವೆ. 2016 ರಲ್ಲಿ ಆರ್‌ಸಿಬಿ ತಂಡವನ್ನು ಮುಂಬೈ 6 ವಿಕೆಟ್‌ಗಳಿಂದ ಸೋಲಿಸಿದರೆ, 2018 ರಲ್ಲಿ ಆರ್‌ಸಿಬಿ 46 ರನ್‌ಗಳಿಂದ ಪರಾಜಯಗೊಂಡಿತ್ತು.
ಇನ್ನು 2019 ರಲ್ಲಿ ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ಇನ್ನು 2023 ರಲ್ಲಿ 6 ವಿಕೆಟ್‌ಗಳಿಂದ ಮತ್ತು 2024 ರಲ್ಲಿ 7 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್ ಪಡೆ ಜಯ ಸಾಧಿಸಿತ್ತು.
ಅಂದರೆ 2015ರ ಬಳಿಕ ಆರ್‌ಸಿಬಿ ತಂಡವು ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ದಾಖಲಿಸಿಲ್ಲ. ಇದೀಗ ಹೊಸ ಪಡೆಯೊಂದಿಗೆ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ವರ್ಷಗಳ ಸೋಲಿನ ಜಿಂಕ್ಸ್ ಅನ್ನು ಮುರಿಯುವ ವಿಶ್ವಾಸದಲ್ಲಿದೆ.
ಚೆಪಾಕ್ ಕೋಟೆ ಭೇದಿಸಿ ಆರ್‌ಸಿಬಿ:
ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನದಲ್ಲಿ 17 ವರ್ಷಗಳ ಬಳಿಕ ಜಯ ಸಾಧಿಸಿದೆ. 2008 ರಲ್ಲಿ ಕೊನೆಯ ಬಾರಿ ಗೆದ್ದಿದ್ದ ಆರ್‌ಸಿಬಿ ಪಡೆ ಈ ಬಾರಿ ಸಿಎಸ್ಕೆ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದೆ. ಇದೇ ಹುಮ್ಮಸ್ಸಿನಲ್ಲಿ ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧ ಕೂಡ ಹೊಸ ಇತಿಹಾಸ ನಿರ್ಮಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ: PSL 2025: ಪಾಕಿಸ್ತಾನ್ ಸೂಪರ್ ಲೀಗ್ನ ವಿದೇಶಿ ಆಟಗಾರರ ಪಟ್ಟಿ ಪ್ರಕಟ
ಹೀಗಾಗಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದರೆ, ಹೊಸ ಇತಿಹಾಸ ನಿರ್ಮಾಣವಾಗಲಿರುವುದು ಖಚಿತ. ಅದರಂತೆ ವಾಂಖೆಡೆಯಲ್ಲಿ ಆರ್‌ಸಿಬಿ ಪರ ವಿಜಯ ಪತಾಕೆಯನ್ನು ಹಾರಿಸಲಿದೆಯಾ ಕಾದು ನೋಡಬೇಕಿದೆ.