IPL 2025: ಈ ಐಪಿಎಲ್ನ ಅತಿದೊಡ್ಡ ಜೊತೆಯಾಟದ ದಾಖಲೆ ಬರೆದ ಗಿಲ್- ಸುದರ್ಶನ್
Shubman Gill and Sai Sudharsan: ಐಪಿಎಲ್ 2025ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅದ್ಭುತ ಬ್ಯಾಟಿಂಗ್ ಇದಕ್ಕೆ ಪ್ರಮುಖ ಕಾರಣ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಅರ್ಧಶತಕ ಗಳಿಸಿ, ಮೊದಲ ವಿಕೆಟ್‌ಗೆ 120 ರನ್‌ಗಳ ಜೊತೆಯಾಟವನ್ನು ನಿರ್ಮಿಸಿದರು. ಇದು ಈ ಸೀಸನ್‌ನಲ್ಲಿ ಅತಿ ದೊಡ್ಡ ಜೊತೆಯಾಟವಾಗಿದೆ

ಐಪಿಎಲ್ 2025 (IPL 2025) ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ಅಮೋಘ ಪ್ರದರ್ಶನ ಮುಂದುವರೆದಿದೆ. ಶುಭ್ಮನ್ ಗಿಲ್ ನೇತೃತ್ವದ ಈ ತಂಡ ಎಲ್ಲರ ನಿರೀಕ್ಷೆಗಳಿಗಿಂತ ಉತ್ತಮವಾಗಿ ಆಡುತ್ತಿದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್. ನಾಯಕ ಶುಭ್ಮನ್ ಗಿಲ್ (Shubman Gill) ಹಾಗೂ ಸಾಯಿ ಸುದರ್ಶನ್ ಆರಂಭಿಕರಾಗಿ ಕಣಕ್ಕಿಳಿದು ಬಹುತೇಕ ಪ್ರತಿಯೊಂದು ಪಂದ್ಯದಲ್ಲೂ ಒಬ್ಬರಲ್ಲ ಒಬ್ಬರು 50ರನ್‌ಗಳ ಇನ್ನಿಂಗ್ಸ್ ಆಡುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರನೇ ಪಂದ್ಯದಲ್ಲಿ ಇಬ್ಬರೂ ಇದೇ ರೀತಿಯ ಪ್ರದರ್ಶನ ನೀಡಿದ್ದು, ತಲಾ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು.
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ಗುಜರಾತ್ ಪರ ರನ್ ಗಳಿಸುತ್ತಿರುವ ಸಾಯಿ ಸುದರ್ಶನ್ ಈ ಪಂದ್ಯದಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿದರೆ. ನಾಯಕ ಶುಭಮನ್ ಗಿಲ್ ಕೂಡ ಅರ್ಧಶತಕ ಬಾರಿಸಿದರು.
ಲಕ್ನೋ ವಿರುದ್ಧ ಅರ್ಧಶತಕ
ಕಳೆದ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ಔಟಾಗಿದ್ದ ಗಿಲ್, ಈ ಬಾರಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಈ ಸೀಸನ್‌ನಲ್ಲಿ ಅವರ ಎರಡನೇ ಅರ್ಧಶತಕವಾಗಿದೆ. ಗಿಲ್ ಬಳಿಕ ಸುದರ್ಶನ್ ಕೂಡ ತಮ್ಮ ಅರ್ಧಶತಕ ದಾಖಲಿಸಿದರು. ಸುದರ್ಶನ್ ಕೂಡ ಕೇವಲ 32 ಎಸೆತಗಳಲ್ಲಿ ಈ ಸೀಸನ್ನ ನಾಲ್ಕನೇ ಅರ್ಧಶತಕವನ್ನು ಗಳಿಸಿದರು. ಇಬ್ಬರೂ ಪವರ್‌ಪ್ಲೇನಲ್ಲಿಯೇ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು ಮತ್ತು 10 ನೇ ಓವರ್‌ನಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸಿದರು. ಗಿಲ್ 38 ಎಸೆತಗಳಲ್ಲಿ 60 ರನ್ ಗಳಿಸಿದರೆ, ಸಾಯಿ ಸುದರ್ಶನ್ 37 ಎಸೆತಗಳಲ್ಲಿ 56 ರನ್ ಗಳಿಸಿದರು.
IPL 2025: ಸಿವಿಎಲ್ ಆಸ್ಪತ್ರೆಗೆ ಭಾರಿ ಮೊತ್ತದ ದೇಣಿಗೆ ನೀಡಿದ ಶುಭ್ಮನ್ ಗಿಲ್
2025 ರ ಐಪಿಎಲ್ನಲ್ಲಿ ಅತಿ ದೊಡ್ಡ ಜೊತೆಯಾಟ
ಈ ಪಂದ್ಯದಲ್ಲಿ ಇಬ್ಬರು ಮೊದಲ ವಿಕೆಟ್‌ಗೆ 120 ರನ್ ಕಲೆಹಾಕಿದರು. ಶುಭ್ಮನ್ ಗಿಲ್ ವಿಕೆಟ್ ಪತನದೊಂದಿಗೆ ಈ ಇಬ್ಬರ ಜೊತೆಯಾಟ ಮುರಿದುಬಿತ್ತು. ಆದಾಗ್ಯೂ ಈ ಜೊತೆಯಾಟದ ಆಧಾರದ ಮೇಲೆ,ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಈ ಆವೃತ್ತಿಯಲ್ಲಿ ಯಾವುದೇ ವಿಕೆಟ್‌ಗೆ ಅತಿ ದೊಡ್ಡ ಜೊತೆಯಾಟ ನಡೆಸಿದ ದಾಖಲೆ ಬರೆದರು. ಕಾಕತಾಳೀಯವೆಂದರೆ, ಈ ಮೊದಲು ಈ ದಾಖಲೆ ಲಕ್ನೋ ಹೆಸರಿನಲ್ಲಿತ್ತು. ಲಕ್ನೋ ಪರ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಎರಡನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ಆಡಿದ್ದರು. ಅತಿ ದೊಡ್ಡ ಜೊತೆಯಾಟದ ದಾಖಲೆಯಲ್ಲದೆ ಗಿಲ್ ಮತ್ತು ಸುದರ್ಶನ್ ಐಪಿಎಲ್ ಇತಿಹಾಸದಲ್ಲಿ ಕೇವಲ 24 ಇನ್ನಿಂಗ್ಸ್‌ಗಳಲ್ಲಿ 12 ನೇ ಬಾರಿಗೆ 50 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಜೊತೆಯಾಟ ಮಾಡಿದ ಮೊದಲ ಜೋಡಿ ಎಂಬ ದಾಖಲೆಯನ್ನು ಬರೆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Sat, 12 April 25