IPL 2025: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ RCB ಆಟಗಾರ ಡೌಟ್
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಣಕ್ಕಿಳಿದರೆ, ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೊದಲ ಕ್ವಾಲಿಫೈಯರ್ ಪಂದ್ಯವು ಇಂದು (ಮೇ 29) ನಡೆಯಲಿದೆ. ಚಂಡೀಗಢ್ನ ಮುಲ್ಲನ್ಪುರ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ತಂಡದ ಪ್ರಮುಖ ಆಟಗಾರ ಟಿಮ್ ಡೇವಿಡ್ ಕಣಕ್ಕಿಳಿಯುವುದು ಅನುಮಾನ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಮಂಡಿರಜ್ಜು ನೋವಿಗೆ ಒಳಗಾಗಿದ್ದ ಡೇವಿಡ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದಾಗ್ಯೂ ಅವರು ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.
ಆದರೆ ಬುಧವಾರ ನಡೆದ ಅಭ್ಯಾಸದ ವೇಳೆ ಟಿಮ್ ಡೇವಿಡ್ ಕಾಣಿಸಿಕೊಂಡಿಲ್ಲ. ಅಂದರೆ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಸಾಧ್ಯತೆಯಿಲ್ಲ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಿಂದಲೂ ಟಿಮ್ ಡೇವಿಡ್ ಹೊರಗುಳಿಯುವ ಸಾಧ್ಯತೆಯಿದೆ.
ಒಂದು ವೇಳೆ ಟಿಮ್ ಡೇವಿಡ್ ಹೊರಗುಳಿದರೆ, ಆರ್ಸಿಬಿ ತಂಡವು ಟಿಮ್ ಸೈಫರ್ಟ್ ಅವರನ್ನು ಕಣಕ್ಕಿಳಿಸಬಹುದು. ಏಕೆಂದರೆ ಕಳೆದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು.
ಅಷ್ಟೇ ಅಲ್ಲದೆ ಈ ಬಾರಿ ಆರ್ಸಿಬಿ ಪರ 8 ಪಂದ್ಯಗಳನ್ನು ಆಡಿರುವ ಲಿಯಾಮ್ ಲಿವಿಂಗ್ಸ್ಟೋನ್ ಈವರೆಗೆ ಕಲೆಹಾಕಿರುವುದು ಕೇವಲ 87 ರನ್ಗಳು ಮಾತ್ರ. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಲಿವಿಂಗ್ಸ್ಟೋನ್ಗೆ ಮತ್ತೆ ಚಾನ್ಸ್ ನೀಡುವ ಸಾಧ್ಯತೆಯಿಲ್ಲ.
ಬದಲಿಗೆ ನ್ಯೂಝಿಲೆಂಡ್ನ ಹೊಡಿಬಡಿ ದಾಂಡಿಗ ಟಿಮ್ ಸೈಫರ್ಟ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಅತ್ತ ಆರಂಭಿಕ ದಾಂಡಿಗನಾಗಿರುವ ಸೈಫರ್ಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಈ ಮೂಲಕ ಆರ್ಸಿಬಿ ಟಾಪ್-3 ಅನ್ನು ಬಲಪಡಿಸುವ ಸಾಧ್ಯತೆಯಿದೆ.
ಹೇಝಲ್ವುಡ್ ರೆಡಿ:
ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಆರ್ಸಿಬಿ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದಾರೆ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ.
ಇತ್ತ ಹೇಝಲ್ವುಡ್ ಆಡುವ ಬಳಗಕ್ಕೆ ಎಂಟ್ರಿ ಕೊಟ್ಟರೆ, ನುವಾನ್ ತುಷಾರ ಹೊರಗುಳಿಯಬೇಕಾಗುತ್ತದೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿರುವ ತುಷಾರ ಅವರನ್ನು ಕೈ ಬಿಡುವುದೇ ಈಗ ಆರ್ಸಿಬಿ ಮುಂದಿರುವ ದೊಡ್ಡ ಸವಾಲು.
ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು
ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್ಸಿಬಿ ವಿರುದ್ಧದ 227 ರನ್ ಬಾರಿಸಿದರೂ, ನುವಾನ್ ತುಷಾರ 4 ಓವರ್ಗಳಲ್ಲಿ ನೀಡಿರುವುದು ಕೇವಲ 26 ರನ್ಗಳು ಮಾತ್ರ. ಹೀಗಾಗಿಯೇ ಜೋಶ್ ಹೇಝಲ್ವುಡ್ ಬದಲಿಗೆ ತಂಡದಿಂದ ಯಾರನ್ನು ಕೈ ಬಿಡುವುದು ಎಂಬ ಚಿಂತೆ ಆರ್ಸಿಬಿಗೆ ಶುರುವಾಗಿದೆ.
