ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದ ಅತ್ಯಂತ ಯಶಸ್ವಿ ಬೌಲರ್ ಯುಜ್ವೇಂದ್ರ ಚಹಲ್ (Yuzvendra Chahal) ಲಯ ತಪ್ಪಿದ್ದಾರೆ. ಹೀಗೆ ತಪ್ಪಿದ ಲಯದೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಚಹಲ್ ಈವರೆಗೆ ಪಡೆದಿರುವುದು ಕೇವಲ 1 ವಿಕೆಟ್ ಮಾತ್ರ. ಇದಕ್ಕೂ ಮುನ್ನ ಐಪಿಎಲ್ ಮೆಗಾ ಹರಾಜಿನ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯುಜ್ವೇಂದ್ರ ಚಹಲ್ ಅವರನ್ನು ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿದ್ದರು.
ಅದರಂತೆ ಪಂಜಾಬ್ ಕಿಂಗ್ಸ್ ಪರ ಈವರೆಗೆ 3 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಯುಜ್ವೇಂದ್ರ ಚಹಲ್ ಈವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಅವರು ಒಂದು ವಿಕೆಟ್ ಮಾತ್ರ ಕಬಳಿಸಿದ್ದಾರೆ ಎಂದರೆ ನಂಬಲೇಬೇಕು.
ಪಂಜಾಬ್ ಕಿಂಗ್ಸ್ ಕಣಕ್ಕಿಳಿದ 3 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ ಒಟ್ಟು 10 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ ಬರೋಬ್ಬರಿ 102 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಂದರೆ ಪ್ರತಿ ಓವರ್ನಲ್ಲಿ 10.20 ರನ್ ನೀಡಿದ್ದಾರೆ.
ಒಂದೆಡೆ ದುಬಾರಿಯಾಗುತ್ತಿದ್ದರೆ, ಮತ್ತೊಂದೆಡೆ ವಿಕೆಟ್ ಪಡೆಯುವಲ್ಲಿ ಸಹ ವಿಫಲರಾಗುತ್ತಿದ್ದಾರೆ. ಈ ಮೂಲಕ ಯುಜ್ವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ತಂಡದ ಚಿಂತೆಯನ್ನು ಹೆಚ್ಚಿಸುತ್ತಿದ್ದಾರೆ.
ಯುಜ್ವೇಂದ್ರ ಚಹಲ್ ಖರೀದಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡಿತ್ತು. ಆದರೆ ಈ ಲೆಕ್ಕಾಚಾರ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೆಲ ಅಂಕಿ ಅಂಶಗಳತ್ತ ಗಮನಹರಿಸಿರುವ ಸಾಧ್ಯತೆಯಿಲ್ಲ.
ಏಕೆಂದರೆ ಯುಜ್ವೇಂದ್ರ ಚಹಲ್ ಕೊನೆಯ 15 ಐಪಿಎಲ್ ಪಂದ್ಯಗಳಲ್ಲಿ ಪಡೆದಿರುವುದು ಕೇವಲ 13 ವಿಕೆಟ್ಗಳು ಮಾತ್ರ. ಅಲ್ಲದೆ ಕಳೆದ 15 ಪಂದ್ಯಗಳಲ್ಲಿ 10.2 ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಈ ಬಾರಿ ಬಿಡುಗಡೆ ಮಾಡಿತ್ತು.
ಇತ್ತ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ಯುಜ್ವೇಂದ್ರ ಚಹಲ್ಗಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರೂ. ವ್ಯಯಿಸಿದೆ. ಆದರೆ ಕಳೆದ ವರ್ಷದಂತೆ ಈ ಬಾರಿ ಕೂಡ ಚಹಲ್ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದಾರೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಕಳೆದ 15 ಪಂದ್ಯಗಳಲ್ಲಿ ಯುಜ್ವೇಂದ್ರ ಚಹಲ್ 9 ಮ್ಯಾಚ್ಗಳಲ್ಲಿ ಪ್ರತಿ ಓವರ್‌ಗೆ 10 ಕ್ಕಿಂತ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದಾರೆ. ಇನ್ನು 15 ಪಂದ್ಯಗಳಲ್ಲಿ 12 ರಲ್ಲಿ 1 ಅಥವಾ ಯಾವುದೇ ವಿಕೆಟ್ ಪಡೆದಿಲ್ಲ ಎಂಬುದೇ ಅಚ್ಚರಿ.
ಇದನ್ನೂ ಓದಿ: KL Rahul: CSK ವಿರುದ್ಧ ಭರ್ಜರಿ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್
ಇದೀಗ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿಯುತ್ತಿರುವ ಯುಜ್ವೇಂದ್ರ ಚಹಲ್ ಮುಂದೆ ಇನ್ನೂ 11 ಲೀಗ್ ಪಂದ್ಯಗಳಿವೆ. ಈ ಪಂದ್ಯಗಳ ಮೂಲಕ ಹಿಂದಿನಂತೆ ಸ್ಪಿನ್ ಮೋಡಿ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
Published On - 11:04 am, Sun, 6 April 25