
ಐಪಿಎಲ್ 2026 (IPL 2026) ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RR vs CSK) ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್ ತಂಡಗಳು ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ, ರಾಜಸ್ಥಾನ್ ಬೌಲಿಂಗ್ ದಾಳಿಗೆ ತತ್ತರಿ ಕೇವಲ 127 ರನ್ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ 8ನೇ ಕ್ರಮಾಂಕದಲ್ಲಿ ಬಂದ ಜೆಮಿ ಓವರ್ಟನ್ ಅತ್ಯಧಿಕ 42 ರನ್ಗಳ ಇನ್ನಿಂಗ್ಸ್ ಆಡಿದರೆ, ಕಾರ್ತಿಕ್ ಶರ್ಮಾ 18 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ 8 ಬ್ಯಾಟ್ಸ್‌ಮನ್‌ಗಳಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ.
ಗುವಾಹಟಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿದ ಸಿಎಸ್ಕೆಗೆ ಉತ್ತಮ ಆರಂಭ ಸಿಗಲಿಲ್ಲ. ಪವರ್‌ಪ್ಲೇನಲ್ಲಿಯೇ ತಂಡ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 41 ರನ್ ಕಲೆಹಾಕಿತು. ಇದು ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿತು. ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮ್ಸನ್ಗೆ 10 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.
ಮೊದಲ ವಿಕೆಟ್ ರೂಪದಲ್ಲಿ ಸಂಜು ಸ್ಯಾಮ್ಸನ್ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು. ಸಂಜು ತಮ್ಮ ಇನ್ನಿಂಗ್ಸ್ನಲ್ಲಿ 7 ಎಸೆತಗಳನ್ನು ಎದುರಿಸಿ 6 ರನ್ಗಳಿಗೆ ಔಟಾದರು. ಸಂಜು ವಿಕೆಟ್ ಪತನದ ನಂತರ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊಂದಿದ್ದ ರುತುರಾಜ್ ಕೂಡ ಸಂಜು ಔಟಾದ ಮುಂದಿನ ಓವರ್ನಲ್ಲೇ ಅಂದರೆ ಮೂರನೇ ಓವರ್ನ ಕೊನೆಯ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ರುತುರಾಜ್ ತಮ್ಮ ಇನ್ನಿಂಗ್ಸ್ನಲ್ಲಿ 11 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 6 ರನ್ ಬಾರಿಸಿ ಔಟಾದರು.
CSK vs RR IPL 2026 Live Score: 127 ರನ್ಗಳಿಗೆ ಸಿಎಸ್ಕೆ ಆಲೌಟ್
ರುತುರಾಜ್ ವಿಕೆಟ್ ಪತನದ ಬಳಿಕ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಕೂಡ ಖಾತೆ ತೆರೆಯದೆ ಔಟಾದರೆ, ಮ್ಯಾಟ್ ಶಾರ್ಟ್ ಕೂಡ 2 ರನ್ಗಳಿಗೆ ಸುಸ್ತಾದರು. ಶಿವಂ ದುಬೆ ಕೂಡ 6 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಜೆಮಿ ಓವರ್ಟನ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 42 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಓವರ್ಟನ್ ಅವರ ಈ ಇನ್ನಿಂಗ್ಸ್, ಸಿಎಸ್ಕೆ ತಂಡವನ್ನು 100 ರನ್ಗಳ ಗಡಿ ದಾಟಿಸಿತು. ಇಲ್ಲದಿದ್ದರೆ, ಸಿಎಸ್ಕೆ ಎರಡಂಕಿ ಮೊತ್ತವನ್ನು ದಾಟುತ್ತಿರಲಿಲ್ಲ. ಇತ್ತ ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 pm, Mon, 30 March 26