CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್

CSK vs MI Match 44: ಐಪಿಎಲ್ 2026ರ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಇದು ಮುಂಬೈ ತಂಡದ ಸೀಸನ್‌ನ 7ನೇ ಸೋಲಾಗಿ ದಾಖಲಾಗಿದ್ದು, ಪ್ಲೇಆಫ್ ಕನಸು ಬಹುತೇಕ ಅಂತ್ಯಗೊಂಡಿದೆ. ಇತ್ತ ಚೆನ್ನೈ ತಂಡ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿ, ತನ್ನ ಪ್ಲೇಆಫ್ ಭರವಸೆ ಜೀವಂತವಾಗಿರಿಸಿಕೊಂಡಿದೆ. ಮುಂಬೈ ಈ ಆವೃತ್ತಿಯಲ್ಲಿ ಲೀಗ್ ಹಂತದಲ್ಲೇ ತನ್ನ ಪಯಣ ಕೊನೆಗೊಳಿಸುವಂತಾಗಿದೆ.

CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್
Mumbai Indians

Updated on: May 02, 2026 | 11:27 PM

ಐಪಿಎಲ್ 2026 (IPL 2026) ರ 44ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (CSK vs MI) ನಡುವೆ ನಡೆಯಿತು. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಸಿಎಸ್​ಕೆ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿಯಲ್ಲಿ ಮುಂಬೈ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಸಿಎಸ್​ಕೆ ವಿರುದ್ಧದ ಈ ಪಂದ್ಯದಲ್ಲಿ ಹೀನಾಯವಾಗಿ ಸೋತ ಮುಂಬೈ ಈ ಆವೃತ್ತಿಯಲ್ಲಿ 7ನೇ ಸೋಲಿಗೆ ಕೊರಳೊಡ್ಡಬೇಕಾಯಿತು. ಇತ್ತ ಈ ಆವೃತ್ತಿಯಲ್ಲಿ 4ನೇ ಗೆಲುವು ದಾಖಲಿಸಿದ ಸಿಎಸ್​ಕೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಈ ಸೋಲಿನೊಂದಿಗೆ ಮುಂಬೈ ತಂಡ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವುದು ಭಾಗಶಃ ಖಚಿತವಾದ್ದಂತ್ತಾಗಿದೆ.

ಟಾಸ್ ಗೆದ್ದು ಪಂದ್ಯ ಸೋತ ಮುಂಬೈ

ಮೇ 2 ರ ಶನಿವಾರದಂದು ನಡೆದ ಈ ಪಂದ್ಯದಲ್ಲಿ, ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇದರ ಹೊರತಾಗಿಯೂ, ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 159 ರನ್ ಗಳಿಸುವ ಮೂಲಕ ಟಾಸ್ ಗೆದ್ದ ಲಾಭವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲವಾಯಿತು. ನಮನ್ ಧೀರ್ ಮುಂಬೈ ಪರ 57 ರನ್ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರೆ, ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಕೂಡ 37 ರನ್ ಬಾರಿಸಿದರು. ಆದಾಗ್ಯೂ, ನಾಯಕ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಆಡಿದ 23 ಎಸೆತಗಳಲ್ಲಿ ಪಾಂಡ್ಯ ಕೇವಲ 18 ರನ್ ಗಳಿಸಲಷ್ಟೇ ಶಕ್ತರಾದರು.

ಬೌಲಿಂಗ್ ವಿಷಯದಲ್ಲಿ ಚೆನ್ನೈ ಪರ ಮತ್ತೊಮ್ಮೆ ಮಿಂಚಿದ ಅನ್ಶುಲ್ ಕಾಂಬೋಜ್ ನಾಲ್ಕು ಓವರ್‌ಗಳಲ್ಲಿ ಕೇವಲ 32 ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಪಡೆದರು. ಸ್ಪಿನ್ನರ್ ನೂರ್ ಅಹ್ಮದ್ ಕೇವಲ 26 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಜೇಮೀ ಓವರ್ಟನ್ (1/23) ಕೂಡ ಉತ್ತಮ ಪ್ರದರ್ಶನ ನೀಡಿದರು.

ರುತುರಾಜ್, ಕಾರ್ತಿಕ್ ಅರ್ಧಶತಕ

ಈ ಪಂದ್ಯವನ್ನು ಗೆಲ್ಲಲು ಮುಂಬೈ ತಂಡಕ್ಕೆ ಸಿಎಸ್‌ಕೆಗಿಂತ ಉತ್ತಮ ಬೌಲಿಂಗ್‌ನ ಅಗತ್ಯವಿತ್ತು. ಇದಕ್ಕೆ ಪೂರಕವಾಗಿ ಜಸ್ಪ್ರೀತ್ ಬುಮ್ರಾ ಎರಡನೇ ಓವರ್‌ನಲ್ಲಿಯೇ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಫಾರ್ಮ್‌ಗೆ ಮರಳಿದ್ದ ನಾಯಕ ಗಾಯಕ್ವಾಡ್, ಉರ್ವಿಲ್ ಪಟೇಲ್ ಜೊತೆಗೂಡಿ 49 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆ ನಂತರ ಗಾಯಕ್ವಾಡ್ ಜೊತೆಯಾದ, ಯುವ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಕೂಡ ನಾಯಕನಿಗೆ ಉತ್ತಮ ಸಾಥ್ ನೀಡಿದರು.

CSK vs MI IPL 2026 Highlights: ಮುಂಬೈ ತಂಡಕ್ಕೆ 7ನೇ ಸೋಲು

ಕಾರ್ತಿಕ್ ಹಾಗೂ ರುತುರಾಜ್ ತಂಡವನ್ನು ನಿಧಾನವಾಗಿ ಗುರಿಯತ್ತ ಮುನ್ನಡೆಸಿದರು. ಈ ಹಂತದಲ್ಲಿ ರುತುರಾಜ್ ತಮ್ಮ ಸತತ ಎರಡನೇ ಅರ್ಧಶತಕವನ್ನು ಪೂರೈಸಿದರೆ, ಇತ್ತ ಕಾರ್ತಿಕ್ ಕೂಡ ತಮ್ಮ ಮೊದಲ ಐಪಿಎಲ್ ಅರ್ಧಶತಕವನ್ನು ಕಲೆಹಾಕಿದರು. ಅಂತಿಮವಾಗಿ, 98 ರನ್‌ಗಳ ಪಾಲುದಾರಿಕೆಯೊಂದಿಗೆ, ಚೆನ್ನೈ ಕೇವಲ 18.1 ಓವರ್‌ಗಳಲ್ಲಿ ಗುರಿಯನ್ನು ತಲುಪಿ, ಈ ಆವೃತ್ತಿಯ ನಾಲ್ಕನೇ ಗೆಲುವು ದಾಖಲಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:14 pm, Sat, 2 May 26

Follow Us